ಆನೇಕಲ್:ಪಟ್ಟಣದ ಬನ್ನೇರುಘಟ್ಟ ರಸ್ತೆಯ ಚಿನ್ನಪ್ಪಸ್ವಾಮಿ ದೇವಾಲಯದಲ್ಲಿ ಕಡೇ ಕಾರ್ತೀಕ ಸೋಮವಾರದ ಪ್ರಯುಕ್ತ ಕಡಲೆಕಾಯಿ ಪರಿಷೆ ಸಂಭ್ರಮದಿಂದ ನೆರವೇರಿತು.
ಚಿನ್ನಪ್ಪಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗಿನಿಂದಲೂ ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು. ಸಂಜೆ ವೇಳೆಗೆ ಪರಿಷೆಯಲ್ಲಿ ಜನಜಂಗುಳಿ ಹೆಚ್ಚಾಗಿ ಜಾತ್ರೆಯು ರಂಗೇರಿತ್ತು.
ದೇವಾಲಯದ ಆವರಣದಲ್ಲಿ ವಿವಿಧೆಡೆಯಿಂದ ಬಂದಿದ್ದ ಕಡಲೆಕಾಯಿ ರಾಶಿಗಳು ತುಂಬಿದ್ದವು. ಭಕ್ತರು ಕಡಲೆಕಾಯಿ ಕೊಂಡು ಸಂಭ್ರಮಿಸಿದರು. ಮಕ್ಕಳು ಹಾಗೂ ಭಕ್ತರು ಕಡಲೆಕಾಯಿಗಳನ್ನು ದೇವಾಲಯದತ್ತ ಎಸೆದು ಭಕ್ತಿ ಸಮರ್ಪಿಸಿದರು. ಭಕ್ತರು ಪ್ರಸಾದವೆಂಬಂತೆ ಅವುಗಳನ್ನು ಆಯ್ದುಕೊಂಡುತಿನ್ನುತ್ತಿದ್ದರು.
ಕಡಲೆಕಾಯಿ ಪ್ರಿಯ ಚಿನ್ನಪಸ್ವಾಮಿ: ಬೇವಿನ ಮರದ ಲಿಂಗಪ್ಪನವರ ಮನೆತನದ ಚಿನ್ನಪ್ಪ ಅವರ ವ್ಯಕ್ತಿತ್ವ ವಿಶಿಷ್ಟವಾದುದು. ಅವಧೂತರಾಗಿದ್ದ ಚಿನ್ನಪ್ಪ ಸ್ವಾಮಿ ಊರಿನ ಯಾರ ಮನೆಯಲ್ಲಾದರೂ ಸಾವು ಸಂಭವಿಸಿದರೆ ಈ ವಿಷಯ ತಿಳಿಯುತ್ತಿದ್ದಂತೆ ಅಲ್ಲಿಗೆ ಹಾಜರಾಗುತ್ತಿದ್ದರು.
ಹೆಣ ಸಾಗಿಸಿ ಶವ ಸಂಸ್ಕಾರ ಮುಗಿಯುವವರೆಗೂ ಮನೆಯಲ್ಲಿದ್ದು ಸಹಾಯ ಮಾಡುತ್ತಿದ್ದರು ಎನ್ನಲಾಗಿದೆ. ಚಿನ್ನಪ್ಪ ಸ್ವಾಮಿ ಕಡಲೆಕಾಯಿ ಪ್ರಿಯರಾಗಿದ್ದರು. ಹಾಗಾಗಿ, ಕಡೇ ಕಾರ್ತೀಕ ಸೋಮವಾರದಂದು ಇಲ್ಲಿ ಕಡಲೆಕಾಯಿ ಪರಿಷೆಯು ವಿಶೇಷವಾಗಿ ನಡೆಯುತ್ತದೆ.
ಆನೇಕಲ್, ಥಳೀ, ಹಾರೋಹಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ಮಾರಾಟಗಾರರು ಜಾತ್ರೆಗೆ ಆಗಮಿಸುತ್ತಾರೆ. ಭಕ್ತರು ಕಡಲೆಕಾಯಿ ಕೊಂಡು ಚಿನ್ನಪ್ಪಸ್ವಾಮಿಗೆ ಅರ್ಪಿಸುವುದು ಇಲ್ಲಿನ ವಿಶೇಷ.
ಕಳೆದ 15 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪರಿಷೆ ಕಳೆಗುಂದಿತ್ತು. ಮಳೆಯಿಂದಾಗಿ ಕಡಲೆಕಾಯಿ ಅಂಗಡಿಗಳು ಕಡಿಮೆ ಇದ್ದವು. ಬೆಳಿಗ್ಗೆ ಜನಸಂಖ್ಯೆಯೂ ವಿರಳವಾಗಿತ್ತು. ಸಂಜೆಯ ನಂತರ ಭಕ್ತರು ಪರಿಷೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.