ಆನೇಕಲ್: ಪಟ್ಟಣಕ್ಕೆ ಸಮೀಪದ ತಮಿಳುನಾಡಿನ ಡೆಂಕಣಿಕೋಟೆಯಲ್ಲಿ ಕನಕ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕನಕ ಜಯಂತಿಯ ಪ್ರಯುಕ್ತ ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ಪವಾಡ ಆಯೋಜಿಸಲಾಗಿತ್ತು. ವಿವಿಧ ಬೀದಿಗಳಲ್ಲಿ ವೈಭವದ ಮೆರವಣಿಗೆ ನಡೆಯಿತು.
ಬಿಜಾಪುರ ಹುಲಿಜಂತಿ ಮಠದ ಮಾಳಿಂಗರಾಯ ಮಹಾರಾಜ್ ಸ್ವಾಮೀಜಿ ಮಾತನಾಡಿ, ‘ಕಾವ್ಯದ ಮೂಲಕ ಸಮಾಜದ ಬದಲಾವಣೆಗೆ ಕನಕದಾಸರು ಶ್ರಮಿಸಿದರು. ಸಮಾಜದಲ್ಲಿನ ಕಂದಾಚಾರಗಳನ್ನು ಹೋಗಲಾಡಿಸಲು ತಮ್ಮ ಕೀರ್ತನೆಗಳ ಮೂಲಕ ಶ್ರಮಿಸಿದ್ದಾರೆ. ಕೀರ್ತನೆಗಳ ಮೂಲಕ ಜನರ ಮನೋಭಾವನೆಗಳನ್ನು ಬದಲಾಯಿಸಿ ಒಳ್ಳೆಯ ಆಲೋಚನೆಗಳನ್ನು ಮಾಡುವಂತೆ ಮಾಡಿದ ಸಾಮಾಜಿಕ ಕ್ರಾಂತಿಕಾರಿ ಸಂತರು ಕನಕದಾಸರಾಗಿದ್ದಾರೆ’
ಎಂದರು.
ಎಎಪಿ ರೋಣ ವಿಧಾನಸಭಾ ಕ್ಷೇತ್ರದ ಮುಖಂಡ ಆನೇಕಲ್ ದೊಡ್ಡಯ್ಯ ಮಾತನಾಡಿ, ‘ಸಮಾಜದಲ್ಲಿ ಸಮಾನತೆಯನ್ನು ತರಲು ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಹೆಚ್ಚಿನ ಒತ್ತು ನೀಡಿದ್ದರು. ತಮ್ಮ ಭಕ್ತಿಯ ಮೂಲಕ ದೇವರನ್ನು ಒಲಿಸಿಕೊಂಡು ಮಹಾನ್ ಸಂತ ಕನಕರು. ಶಾಲಾ ಕಾಲೇಜುಗಳಲ್ಲಿ ಕೀರ್ತನೆಗಳ ಪ್ರಚಾರ ಹಾಗೂ ದಾಸಶ್ರೇಷ್ಠರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು’ ಎಂದರು.
‘ಸಮಾಜದಲ್ಲಿನ ಕಂದಾಚಾರ, ಮೂಢನಂಬಿಕೆ, ಜಾತಿ ವ್ಯವಸ್ಥೆ, ಅಸಮಾನತೆಯನ್ನು ಖಂಡಿಸಿ ಸಮಾಜವನ್ನು ಕೀರ್ತನೆಗಳ ಮೂಲಕ ತಿದ್ದುವ ಕಾರ್ಯ ಮಾಡಿದ್ದಾರೆ. ಅವರ ಚಿಂತನೆಗಳನ್ನು ಯುವ ಸಮುದಾಯ ಅಳವಡಿಸಿಕೊಂಡು ಉತ್ತಮ ಸಮಾಜವನ್ನು ನಿರ್ಮಿಸಬೇಕು. ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕುರುಬ ಸಮುದಾಯದ ಯುವಕರು ಅಧ್ಯಯನ ಮತ್ತು ಸಂಶೋಧನೆ ನಡೆಸಬೇಕು. ಸಂಸ್ಕೃತಿಯ ಉಳಿವಿನಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ’ ಎಂದರು.
ಆಂಧ್ರಪ್ರದೇಶದ ಸಂಸದ ಗೋರಟ್ಲ ಮಾಧವ್, ದೆಹಲಿಯ ಎಎಪಿ ಶಾಸಕ ದಿನೇಶ್ ಮೋನಿಯಾ, ಚಿತ್ರನಟ ಯೋಗಿ, ಸರ್ಕಲ್ ಇನ್‌ಸ್ಪೆಕ್ಟರ್ ಎಲ್.ವೈ.ರಾಜೇಶ್ ಮುಖಂಡ ಪಾಪಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.