ADVERTISEMENT

ನವೆಂಬರ್ 25ರಂದು ದೊಡ್ಡಬಳ್ಳಾಪುರಕ್ಕೆ ‘ಕನ್ನಡ ಜ್ಯೋತಿ ರಥ’ ಆಗಮನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 15:16 IST
Last Updated 23 ನವೆಂಬರ್ 2024, 15:16 IST
ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಅಖಿಲ ಭಾರತ ಕನ್ನಡ‌ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆಯುವ ಕನ್ನಡ ರಥ ಮೆರವಣಿಗೆ ಪೂರ್ವ ಸಿದ್ಧತಾ ಸಭೆ ಶಾಸಕ ಧೀರಜ್‌ ಮುನಿರಾಜ್‌ ಅಧ್ಯಕ್ಷತೆಯಲ್ಲಿ ನಡೆಯಿತು
ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಅಖಿಲ ಭಾರತ ಕನ್ನಡ‌ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆಯುವ ಕನ್ನಡ ರಥ ಮೆರವಣಿಗೆ ಪೂರ್ವ ಸಿದ್ಧತಾ ಸಭೆ ಶಾಸಕ ಧೀರಜ್‌ ಮುನಿರಾಜ್‌ ಅಧ್ಯಕ್ಷತೆಯಲ್ಲಿ ನಡೆಯಿತು   

ದೊಡ್ಡಬಳ್ಳಾಪುರ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ‘ಕನ್ನಡ ಜ್ಯೋತಿ ರಥ’ ದೊಡ್ಡಬಳ್ಳಾಪುರ ತಾಲ್ಲೂಕಿಗೆ ನ.25ರಂದು ಆಗಮಿಸಲಿದೆ. ನ.26ರಂದು ದೊಡ್ಡಬಳ್ಳಾಪುರ ನಗರದಲ್ಲಿ ಕನ್ನಡ ರಥದ ಮೆರವಣಿಗೆ ನಡೆಯಲಿದೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಅಖಿಲ ಭಾರತ ಕನ್ನಡ‌ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆಯುವ ಕನ್ನಡ ರಥ ಮೆರವಣಿಗೆ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.

ದೇವನಹಳ್ಳಿ ತಾಲ್ಲೂಕಿನ ಮೂಲಕ ಆಗಮಿಸುವ ಕನ್ನಡ ರಥ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸಂಚರಿಸಿ ನಂತರ ದೊಡ್ಡಬಳ್ಳಾಪುರ ನಗರದಲ್ಲಿ ವಾಸ್ತವ್ಯ ಇರಲಿದೆ. ನ.26ರಂದು ಮಂಗಳವಾರ ಬೆಳಗ್ಗೆ 9.30ಕ್ಕೆ ನಗರದಲ್ಲಿ ಕನ್ನಡ ರಥ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಕಲಾ ತಂಡಗಳು, ಕನ್ನಡ ಅಭಿಮಾನಿಗಳು, ಕನ್ನಡಪರ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಮಂಡ್ಯದಲ್ಲಿ ಡಿ.20ರಿಂದ ಮೂರು ದಿನಗಳ ಕಾಲ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕನ್ನಡ ಜ್ಯೋತಿ ರಥ ಸಂಚರಿಸಲಿದೆ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮಸ್ತ ಕನ್ನಡಿಗರನ್ನು ಆಹ್ವಾನಿಸುವ ಉದ್ದೇಶದಿಂದ ಕನ್ನಡ ರಥ ಸಂಚರಿಸುತ್ತಿದೆ. ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನ.25ರಂದು ಕನ್ನಡ ರಥದ ಮೆರವಣಿಗೆ ಸಂಚರಿಸಲಿದೆ. ನ.26ರಂದು ಮಧ್ಯಾಹ್ನ ನಂತರ ನೆಲಮಂಗಲ ತಾಲ್ಲೂಕಿಗೆ ಕನ್ನಡ ರಥವನ್ನು ಬೀಳ್ಕೊಡಲಾಗುವುದು ಎಂದರು.

ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು ಮತ್ತು ತಹಶೀಲ್ದಾರ್‌ ವಿದ್ಯಾವಿಭಾರಾಥೋಡ್ ಮಾತನಾಡಿ, ತಾಲ್ಲೂಕಿಗೆ ಆಗಮಿಸುವ ಕನ್ನಡ ರಥವನ್ನು ಸಕಲ ಗೌರವದೊಂದಿಗೆ ಸ್ವಾಗತಿಸಲಾಗುವುದು. ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ಪೂರ್ವ ಸಿದ್ಧತಾ ಸಭೆಯಲ್ಲಿ ಉಪವಿಭಾಗಾಧಿಕಾರಿ ಎನ್‌.ದುರ್ಗಾಶ್ರೀ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎನ್‌.ಮುನಿರಾಜು, ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.