ದೇವನಹಳ್ಳಿ: ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೂ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆಯ ರಾಯಭಾರಿಯಾಗಿ ನೆಲದ ಸದ್ವಿಚಾರಗಳನ್ನು ಕಾಪಾಡುವ ಸೈನಿಕನಂತೆ ಕೆಲಸ ಮಾಡುತ್ತಿದೆ. ಹೊಸ ಆವಿಷ್ಕಾರದ ಪರಿಣಾಮ ನಾವಿಂದು ಮೊಬೈಲ್, ವಿಮಾನಯಾನದ ಅನುಭವ ಪಡೆಯಲು ಸಾಧ್ಯವಾಗಿದೆ’ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ತಿಳಿಸಿದರು.
ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇರುವ ಸಂಸ್ಥೆಗಳ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವ ಲಿಪಿಗಳ ರಾಣಿ ಎಂದೇ ಕನ್ನಡವನ್ನು ಗುರುತಿಸುತ್ತಾರೆ. ಪ್ರಪಂಚದಲ್ಲಿ ಕನ್ನಡ ಅತ್ಯಂತ ವೈಜ್ಞಾನಿಕ ಭಾಷೆಯಾಗಿದೆ ಎಂದರು.
ಓದುವಂತೆ ಮಾತನಾಡುವ, ಮಾತನಾಡುವಂತೆ ಬರೆಯುವ ಹಾಗೂ ನುಡಿದಂತೆ ನಡೆಯುವ ಜನರು ಕನ್ನಡಿಗರು. ಶಿವನ ಡಮರುಗ ನಾದದಿಂದ ಕನ್ನಡ ಭಾಷೆ ಉಗಮಗೊಂಡಿದ್ದು, ಇದೊಂದು ದೇವ ಭಾಷೆಯಾಗಿದೆ ಎಂದು ಹೇಳಿದರು.
ಕರುನಾಡಿನಲ್ಲಿ ಜನಿಸಿದ ಭಗವಾನ್ ಹನುಮಂತನಂತೆ ಕನ್ನಡ ಭಾಷೆಯೂ ಚಿರಂಜೀವಿಯಾಗಿದೆ. ಕನ್ನಡಿಗರ ಆಸ್ಮಿತೆಯ ಪ್ರತೀಕವಾಗಿದೆ ಎಂದು ಬಣ್ಣಿಸಿದರು.
ವಿಮಾನ ನಿಲ್ದಾಣದ ಅಧಿಕಾರಿ ವೆಂಕಟರಮಣ್ ಮಾತನಾಡಿ, ಸಾರ್ವಜನಿಕ ವಿಮಾನಯಾನ ಕ್ಷೇತ್ರದಲ್ಲಿ ಸಾಕಷ್ಟು ಒತ್ತಡ ಕೆಲಸದ ನಡುವೆಯೂ ಕನ್ನಡತನ, ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಭಾಷೆ, ನಾಡು, ಸಂಸ್ಕೃತಿಯ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ನಿಲ್ದಾಣದಿಂದ ಸಾಹಿತ್ಯ ಲೋಕದ ದಿಗ್ಗಜರೊಂದಿಗೆ ಚರ್ಚೆ, ಸಂವಾದ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ ಎಂದರು.
ನಾಡಿನ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ನಾಡಹಬ್ಬ ದಸರಾವನ್ನು ವಿಭಿನ್ನವಾಗಿ ಆಚರಿಸುತ್ತೇವೆ. ಯುಗಾದಿ, ಸಂಕ್ರಾಂತಿಗೆ ನೆಲದ ಸೊಗಡಿಗೆ ಅವಕಾಶ ಕೊಟ್ಟು, ಪ್ರತಿಯೊಂದು ಟರ್ಮಿನಲ್‌ನಲ್ಲಿಯೂ ಪ್ರಯಾಣಿಕ ಸೂಚನಾ ಫಲಕದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಿದ್ದೇವೆ. ವಿಶ್ವಕ್ಕೆ ಕನ್ನಡ ಕಂಪು ಪಸರಿಸಲು ಕಂಕಣ ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ವಿಮಾನ ನಿಲ್ದಾಣದ ಅಧಿಕಾರಿಗಳಾದ ಅಂಬಾರಸನ್, ಭಾಸ್ಕರ್ ಆನಂದ್ ರಾವ್, ಸಜೀತ್, ಕೆನತ್, ಕಸಪಾ ಜಿಲ್ಲಾ ಅಧ್ಯಕ್ಷ ಕೃಷ್ಣಪ್ಪ, ರಮೇಶ್, ಹೇಮಂತ್ ಮಾದೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.