ಆನೇಕಲ್: ಕನ್ನಡ ಶಾಲೆಗಳನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಸಮಾಜದಲ್ಲಿ ಒಂದು ಮನಸ್ಥಿತಿ ಮೂಡಿಸುವ ಅವಶ್ಯ ಇದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು, ಸರ್ಕಾರ ವ್ಯಾಪಕ ಆಂದೋಲನ ಕೈಗೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಹ ಸರಕಾರ್ಯವಾಹ ಮುಕುಂದ್ ಅವರು ತಿಳಿಸಿದರು.
ಅವರು ತಾಲ್ಲೂಕಿನ ಗಡಿಗ್ರಾಮ ಸೋಲೂರು ಗ್ರಾಮದಲ್ಲಿ ಯುವ ಬ್ರಿಗೇಡ್ ಸಂಸ್ಥೆ ನೇತೃತ್ವದಲ್ಲಿ ದಾನಿಗಳ ನೆರವಿನಿಂದ ಅಭಿವೃದ್ಧಿಪಡಿಸಿರುವ ವಿನೋಬಾ ಭಾವೆ ವಿದ್ಯಾ ಸಂಸ್ಥೆ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಮೈಸೂರಿನಲ್ಲಿ ಈ ಹಿಂದೆ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರ ನೇತೃತ್ವದಲ್ಲಿ ಸಂಘ ಪರಿವಾರದ ಪದಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಕನ್ನಡ ಶಾಲೆಗಳಿಗೆ ಸೇರಿಸಬೇಕಾದ ಅವಶ್ಯ ಮತ್ತು ಮಾತೃಭಾಷೆ ಮಹತ್ವದ ಬಗ್ಗೆ ಅರಿವು ಮೂಡಿಸುವ ಅಭಿಯಾನ ಕೈಗೊಂಡಿದ್ದರು. ಇಂತಹ ಅಭಿಯಾನ ಗ್ರಾಮ ಗ್ರಾಮಗಳಲ್ಲಿ ನಡೆಯಬೇಕು. ಮನೆ ಮನೆಗಳಲ್ಲಿ ಮನ ಪರಿವರ್ತನೆ ಕಾರ್ಯ ನಡೆಯುವ ಮೂಲಕ ಕನ್ನಡ ಶಾಲೆಗಳಿಗೆ ಕಾಯಕಲ್ಪ ನೀಡಬೇಕಾಗಿದೆ. ಆಂಗ್ಲ ಭಾಷೆ ಅಬ್ಬರದಲ್ಲಿ ಮಾತೃ ಭಾಷೆ ಹಲವು ಸವಾಲು ಎದುರಿಸುತ್ತಿದೆ. ಪ್ರತಿಯೊಂದು ಮಗು ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯಬೇಕೆಂಬುದು ಎಲ್ಲ ತಜ್ಞರ ಅಭಿಪ್ರಾಯವಾಗಿದೆ ಎಂದರು.
ಶಿಕ್ಷಣ ವ್ಯವಸ್ಥೆ, ಪ್ರೇರಣೆ, ಉತ್ಸಾಹ ಇದು ಸಮಾಜದಲ್ಲಿ ಉತ್ತಮ ವಾತಾ
ವರಣ ನಿರ್ಮಿಸುವ ನಿಟ್ಟಿನಲ್ಲಿ ಸಮುದಾಯದ ಮನಸ್ಥಿತಿ ಸಜ್ಜುಗೊಳಿಸ
ಬೇಕಾಗಿದೆ. ಗಡಿನಾಡಿನಲ್ಲಿ ಕನ್ನಡ ಶಾಲೆ ಉಳಿಸುವುದು ಒಂದು ಸವಾಲಾಗಿದೆ. ಹಾಗಾಗಿ ಯುವ ಬ್ರಿಗೇಡ್ ತಮಿಳುನಾಡಿನ ಗಡಿಯಲ್ಲಿರುವ ವಿನೋಬಭಾವೆ ಕನ್ನಡ ಶಾಲೆಗೆ ದಾನಿಗಳ ನೆರವಿನಿಂದ ಕಾಯಕಲ್ಪ ನೀಡಿದೆ. ತೋರಣ (ಕಟ್ಟಡ) ಕಟ್ಟಿದರೆ ಸಾಲದು ಆ ಶಾಲೆಯಲ್ಲಿ ಹೂರಣ ತುಂಬಬೇಕಾಗಿದೆ ಎಂದರು.
ಯುವ ಬ್ರಿಗೇಡ್ ಸಂಸ್ಥೆ ಗಡಿಭಾಗದಲ್ಲಿ ಮಾಡಿರುವ ಈ ಪ್ರಯೋಗ ಉತ್ತಮ ಪ್ರಯತ್ನವಾಗಿದೆ. ಇದು ರಾಜ್ಯಕ್ಕೆ ಮಾದರಿಯಾಗಲಿ. ರಾಜ್ಯದ ಗಡಿಭಾಗದಲ್ಲಿ 32 ತಾಲ್ಲೂಕು
ಗಳಿವೆ. ಎಲ್ಲ ತಾಲ್ಲೂಕುಗಳಲ್ಲೂ ಶೈಕ್ಷಣಿಕ ಕ್ರಾಂತಿಗೆ ಮುಂದಾಗಬೇಕಾಗಿದೆ ಎಂದರು.
ಶಕ್ತಿ ಕೇಂದ್ರ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಸೂಲಿಬೆಲೆ ಚಕ್ರವರ್ತಿ ಮಾತನಾಡಿ, ವಿನೋಬಾ ಭಾವೆ ಶಾಲೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿತ್ತು. ಗಡಿನಾಡಿನ ಕನ್ನಡ ಶಾಲೆಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಯುವ ಬ್ರಿಗೇಡ್, ನಿವೇದಿತಾ ಪ್ರತಿಷ್ಠಾನ ಮತ್ತು ಶಕ್ತಿ ಕೇಂದ್ರದ ನೇತೃತ್ವದಲ್ಲಿ ದಾನಿಗಳ ನೆರವು ಪಡೆದು ಸುಮಾರು ₹35ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ ಎಂದರು. ಟಿಂಕೆನ್ ಮತ್ತು ಜಿಎಸ್‌ಬಿ ಸಂಸ್ಥೆಗಳು ನೆರವು ನೀಡಿವೆ ಎಂದರು.
ಯುವ ಬ್ರಿಗೇಡ್‌ನ ರಾಜ್ಯ ಸಂಚಾಲಕ ಚಂದ್ರಶೇಖರ್, ಕಿರಣ್ ಪಾಟೀಲ್, ರಾಘವೇಂದ್ರ ಪ್ರಭು, ಮುಖಂಡರಾದ ಸಿ.ತೋಪಯ್ಯ, ಎನ್.ಶಂಕರ್, ಶರತ್, ಜಗದೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ನರಸಿಂಹರಾಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.