ವಿಜಯಪುರ: ಸರ್ಕಾರ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಕೇವಲ ₹500 ಕೋಟಿ ಮೀಸಲಿಟ್ಟಿದೆ. ಆದರೆ, ಸಮುದಾಯದ ಯಾರೊಬ್ಬರ ಏಳಿಗೆಯೂ ಇದರಿಂದ ಸಾಧ್ಯವಾಗುವುದಿಲ್ಲ ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಮುಖಂಡ ಎಸ್.ಎಂ.ರವಿಪ್ರಕಾಶ್ ತಿಳಿಸಿದರು.
ನೆಲಮಂಗಲದಲ್ಲಿ ನಡೆಯಲಿರುವ ಬೆಂಗಳೂರು ವಿಭಾಗಿಯ ಒಕ್ಕಲಿಗರ ಬೃಹತ್ ಸಮಾವೇಶಕ್ಕೆ ಹೊರಟ ಬಸ್‌ಗಳಿಗೆ ಚಾಲನೆ ನೀಡಿ ಮಾತನಾಡಿದರು.
ಉತ್ತರ ಕರ್ನಾಟಕದಲ್ಲಿ ಕುರು ಒಕ್ಕಲಿಗರು ಕಡಿಮೆ ಇರುವ ಕಾರಣ ಅವರನ್ನು ಅಲ್ಪಸಂಖ್ಯಾತರಂತೆ ಕಾಣುತ್ತಿದ್ದಾರೆ. ಇದುವರೆಗೂ ಅವರಿಗೆ ಜಾತಿ ಪ್ರಮಾಣಪತ್ರ ನೀಡಿಲ್ಲ. ಈ ಹಿಂದೆ ಬಾಲಗಂಗಾಧರನಾಥ ಸ್ವಾಮೀಜಿ, ಕುರು ಒಕ್ಕಲಿಗರ ಏಳಿಗೆಗಾಗಿ ಮುಂದಾದಾಗ ರಾಜಕೀಯ ದುರುದ್ದೇಶದಿಂದ ಸಾಧ್ಯವಾಗಿರಲಿಲ್ಲ. ಈಗ ನಿರ್ಮಲಾನಂದ ಸ್ವಾಮೀಜಿ ಅವರ ಪ್ರಯತ್ನದಿಂದ ಸಮುದಾಯಕ್ಕೆ ನ್ಯಾಯ ಕೊಡಿಸುವಂತಹ ಕೆಲಸ ಮಾಡಲು ಹೊರಟಿದ್ದೇವೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದರು.
ತಾಲ್ಲೂಕು ಘಟಕದ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಸಮಾಜದ ಬಡವರಿಗೆ ಶಿಕ್ಷಣ ಕೊಡಿಸಲು ಒಕ್ಕಲಿಗ ಸಮುದಾಯದ ಸ್ಥಿತಿವಂತರು ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡಬೇಕು. ಮಠದ ಬಾಲಗಂಗಾಧರನಾಥ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ ಸಹ ದೇವಾಲಯಗಳಿಗಿಂತ ಶಿಕ್ಷಣ ದೇಗುಲಗಳಿಗೆ ಆದ್ಯತೆ ನೀಡಿದ್ದಾರೆ ಎಂದರು.
ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಚನ್ನೇಗೌಡ ಮಾತನಾಡಿ, ಸಮುದಾಯಕ್ಕೆ ಸಿಗಬೇಕಾಗಿರುವ ಸೌಲಭ್ಯ ಜನಸಂಖ್ಯಾಧಾರಿತವಾಗಿ ಕಲ್ಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ತಾರತಮ್ಯ ನೀತಿ ಕೈಬಿಡಬೇಕು. ರೈತಾಪಿ ವರ್ಗದ ಜನರ ಹಿತ ಕಾಪಾಡಲು ಮುಂದಾಗಬೇಕು ಎಂದರು.
ಉಪಾಧ್ಯಕ್ಷ ಕುದುಪಕುಂಟೆ ಶಂಕರನಾರಾಯಣ, ಕಾರ್ಯದರ್ಶಿ ನಂಜೇಗೌಡ, ಖಜಾಂಚಿ ಮಂಜುನಾಥ್, ನಿರ್ದೇಶಕರಾದ ಗೋಪಾಲರೆಡ್ಡಿ, ರಾಮಚಂದ್ರಪ್ಪ, ಪ್ರಕಾಶ್, ರಮೇಶ್, ಸೊಣ್ಣೇಗೌಡ, ನಾರಾಯಣಸ್ವಾಮಿ, ಮಾರಪ್ಪ, ಡಿ.ಎಂ.ಮುನಿರಾಜು, ಗಜೇಂದ್ರ, ಶಿವಕುಮಾರ್, ಚಂದ್ರು, ನಾಗರಾಜ್, ಅಶ್ವಥನಾರಾಯಣ, ಸುಬ್ರಮಣಿ, ನಾಗೇಶ್, ಶ್ರೀನಿವಾಸ್, ಶ್ರೀರಾಮ್, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.