ದೊಡ್ಡಬಳ್ಳಾಪುರ: ರಾಜ್ಯದಲ್ಲಿ ನೂತನ ಸರ್ಕಾರ ಆಡಳಿತಕ್ಕೆ ಬಂದ ನಂತರ ಮಂಡನೆಯಾಗುತ್ತಿರುವ ಬಜೆಟ್‌ನಲ್ಲಾದರೂ ತಾಲ್ಲೂಕಿನ ಜನರ ಬಹು ದಿನಗಳ ಕನಸಿನ ಯೋಜನೆಗಳಾಗಿರುವ ಜಿಲ್ಲಾ ಕ್ರೀಡಾಂಗಣ, ಜಿಲ್ಲಾ ಆಸ್ಪತ್ರೆ, ಎತ್ತಿನಹೊಳೆ ಕಾಮಗಾರಿ ಪೂರ್ಣವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಾರ್ಯಾಲಯ ಬೀರಸಂದ್ರ ಸಮೀಪ 2018ರಲ್ಲಿ ಕಾರ್ಯಾರಂಭ ಮಾಡಿದ ಸಂದರ್ಭಕ್ಕೂ ಮುನ್ನವೇ ತಾಲ್ಲೂಕಿನ ಆದಿನಾರಾಯಣ ಹೊಸಹಳ್ಳಿ ಸಮೀಪ 9 ಎಕರೆ ಪ್ರದೇಶವನ್ನು ಜಿಲ್ಲಾ ಕ್ರೀಡಾಂಗಣಕ್ಕೆ ಮೀಸಲಿಡಲಾಗಿದೆ. ಸರ್ಕಾರಿ ದಾಖಲೆಯಲ್ಲಿ ಮಾತ್ರ ಜಿಲ್ಲಾ ಕ್ರೀಡಾಂಗಣ ಎಂದು ಹೆಸರು ಇದೆಯೇ ವಿನಹ ಇದುವರೆಗೂ ಯಾವುದೇ ಪ್ರಗತಿ ಕಂಡಿಲ್ಲ. ಪ್ರತಿ ಬಜೆಟ್ ಮಂಡನೆ ಸಮಯದಲ್ಲೂ ಜಿಲ್ಲೆಯ ಕ್ರೀಡಾಪಟುಗಳು ಆಸೆಗಣ್ಣಿನಿಂದ ಕ್ರೀಡಾಂಗಣ ಅಭಿವೃದ್ಧಿ ನಿರೀಕ್ಷೆ ಮಾಡುತ್ತಲೇ ಇದ್ದಾರೆ. ಆದರೆ ಕ್ರೀಡಾಂಗಣದ ಅಭಿವೃದ್ಧಿಗೆ ಬಿಡಿಗಾಸು ಇದುವರೆಗೂ ಮಂಜೂರಾಗಿಲ್ಲ ಎಂಬುದು ಕಬ್ಬಡಿ ಕ್ರೀಡಾ ಸಮಿತಿ ಮುಖಂಡ ಜಿ.ಯಲ್ಲಪ್ಪ ಅವರ ಮಾತಾಗಿದೆ.
ಇದೇ ಸ್ಥಿತಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ನಿರ್ಮಾಣದ್ದು. ನಗರಸಭೆ ವ್ಯಾಪ್ತಿಯ ಸಿದ್ದೇನಾಯಕನಹಳ್ಳಿ ಸಮೀಪ 9 ಎಕರೆ ಭೂಮಿಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕಾಗಿ ಮೀಸಲಿಡಲಾಗಿದೆ. 2020ರ ಬಜೆಟ್‌ನಲ್ಲೇ ₹90 ಕೋಟಿ ಮಂಜೂರಾತಿ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ನಿರ್ಮಾಣ ತುರ್ತು ಅಗತ್ಯವಾಗಿದೆ. ಬಜೆಟ್‌ನಲ್ಲಿ ಮಂಜೂರಾತಿ ಹಾಗೂ ಹಣ ಬಿಡುಗಡೆಯಾಗಬಹುದು ಎನ್ನುವ ನಿರೀಕ್ಷೆ ಜನರದ್ದು.
ಈ ಹಿಂದೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಇದ್ದುದ್ದರಿಂದ ಜಿಲ್ಲಾ ಆಸ್ಪತ್ರೆ ಕಾಮಗಾರಿಗೆ ಹಣ ಬಿಡುಗಡೆಗೆ ಬಿಜೆಪಿ ಆಡಳಿತದ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆಯಲೇ ಇಲ್ಲ. ಕ್ಷೇತ್ರದ ಈ ಹಿಂದಿನ ಶಾಸಕ ಟಿ.ವೆಂಕಟರಮಣಯ್ಯ ಅವರು ಯಾವುದೇ ಸಾರ್ವಜನಿಕ ವೇದಿಕೆ ಸಿಕ್ಕರೂ ಆಸ್ಪತ್ರೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಹಣ ನೀಡದೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ದೂರುತ್ತಲೇ ಇದ್ದರು. ಈಗ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ಈ ಹಿಂದಿನಂತೆಯೇ ಮಲತಾಯಿ ಧೋರಣೆಗೆ ಜಿಲ್ಲಾ ಆಸ್ಪತ್ರೆ ಬಲಿಯಾಗುತ್ತದೊ ಅಥವಾ ಜನರ ಹಿತದೃಷ್ಟಿಯಿಂದ ಆಸ್ಪತ್ರೆ ನಿರ್ಮಾಣಕ್ಕೆ ಹಣ ಮಂಜೂರಾಗುತ್ತದೆಯೋ ಕಾದು ನೋಡಬೇಕಿದೆ.
ಹೆಚ್ಚಿದ ನೇಕಾರರ ನಿರೀಕ್ಷೆಗಳು: ಕೋವಿಡ್ ನಂತರ ನೇಕಾರಿಕೆ ಸಂಕ್ರಮಣ ಕಾಲಘಟ್ಟಕ್ಕೆ ಬಂದು ನಿಂತಿದೆ. ಕೃಷಿಯ ನಂತರ ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮೀಣ ಭಾಗದ ಆರ್ಥಿಕತೆಯ ಜೀವನಾಡಿ ನೇಕಾರಿಕೆಯಾಗಿದೆ. ನೇಕಾರರಿಗೆ ವಿದ್ಯುತ್ ಬೆಲೆ ಏರಿಕೆ ಹಾಗೂ ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ ಉದ್ಯಮಕ್ಕೆ ತೀವ್ರ ಪೆಟ್ಟು ನೀಡಿವೆ. ಇಷ್ಟೆಲ್ಲಾ ಸಂಕಷ್ಟಗಳ ನಡುವೆಯು ನೇಯುತ್ತಿರುವ ಸೀರೆಗಳಿಗೆ ಸೂಕ್ತ ಬೆಲೆ ದೊರೆಯದೆ ದಲ್ಲಾಳಿಗಳ ಹಾವಳಿಯಿಂದ ಬೇಸತ್ತು ಹೋಗುವಂತೆ ಮಾಡಿದೆ.
ಇಲ್ಲಿ ನೇಯುತ್ತಿರುವ ಸೀರೆಗಳು ಆಂಧ್ರಪ್ರದೇಶ, ಸೂರತ್ ಸೇರಿದಂತೆ ಬೇರೆ ಬೇರೆ ಬ್ರಾಂಡ್‌ಗಳ ಅಡಿಯಲ್ಲಿ ಮಾರಾಟವಾಗುತ್ತಿರುವುದು ಮತ್ತೊಂದು ದೊಡ್ಡ ಹೊಡೆತವಾಗಿದೆ. ಹೀಗಾಗಿಯೇ ಸ್ಥಳೀಯ ಬ್ರಾಂಡ್ ಹೆಸರಿನಲ್ಲೇ ಸೀರೆಗಳ ಮಾರಾಟಕ್ಕೆ ಸೂಕ್ತ ಮಳಿಗೆಗಳ ನಿರ್ಮಾಣವಾಗಬೇಕು. ವಿದ್ಯುತ್ ಬೆಲೆ ಏರಿಕೆ ತಗ್ಗಿಸಬೇಕು. ಸಹಕಾರಿ ಕ್ಷೇತ್ರದ ಮೂಲಕ ಸರ್ಕಾರವೇ ಸೀರೆಗಳನ್ನು ಖರೀದಿ ಮಾಡುವಂತೆ ಆಗಬೇಕು ಎನ್ನುವ ಬೇಡಿಕೆಗಳನ್ನು ಒಳಗೊಂಡ ದೊಡ್ಡ ಪಟ್ಟಿಯನ್ನೇ ನೇಕಾರ ಸಂಘಟನೆಗಳ ನಿಯೋಗ ರಾಜ್ಯದ ಜವಳಿ ಸಚಿವರಿಗೆ ನೀಡಿ ಬಂದಿವೆ. ಹೀಗಾಗಿಯೇ ನೇಕಾರರ ದೃಷ್ಟಿ ಬಜಟ್‌ನತ್ತ ನೆಟ್ಟಿದೆ. ನೇಕಾರಿಕೆ ಸಿಹಿ ಸುದ್ದಿ ದೊರೆಯುವ ನಿರೀಕ್ಷೆಯಲ್ಲಿ ಇದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಿ.ಎ.ವೆಂಕಟೇಶ್.
ಮಂಜೂರಾತಿ ಪತ್ರ ನೋಡಿದ್ದಷ್ಟೇ ಭಾಗ್ಯ:
ತಾಲ್ಲೂಕಿನಲ್ಲಿ ಮಾಕಳಿ ಬೆಟ್ಟ, ಹುಲಕುಡಿ ಬೆಟ್ಟ ಸೇರಿದಂತೆ ಹಲವಾರು ಪ್ರವಾಸಿ ತಾಣಗಳು ಇವೆ. ಇವುಗಳ ಅಭಿವೃದ್ಧಿಗೆ 2020ರಲ್ಲಿ ಪ್ರಾಥಮಿಕ ಹಂತವಾಗಿ ₹1 ಕೋಟಿ ಮಂಜೂರು ಮಾಡಿ ಪ್ರವಾಸೋದ್ಯಮ ಇಲಾಖೆ ಆದೇಶ ಹೊರಡಿಸಿತ್ತು. ಈ ಆದೇಶವನ್ನು ನೋಡಿ ಖುಷಿ ಪಟ್ಟಿದ್ದು ಬಿಟ್ಟರೆ ಇದುವರೆಗೂ ಈ ಆದೇಶ ಜಾರಿಗೆ ಬಂದಿದ್ದೇ ಇಲ್ಲ. ಈ ಬಾರಿಯ ಬಜೆಟ್‌ನಲ್ಲಾದರೂ ತಾಲ್ಲೂಕಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಉತ್ತೇಜನ ದೊರೆಯಬೇಕು ಎನ್ನುವುದು ಜನರ ಒತ್ತಾಯವಾಗಿದೆ.
ಎತ್ತಿನಹೊಳೆಗೆ ಕಾಮಗಾರಿ ಹೆಚ್ಚಿನ ಆರ್ಥಿಕ ನೆರಿವಿನ ನಿರೀಕ್ಷೆ :
ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಯ ಪ್ರಮುಖ ಕೇಂದ್ರ ಬಿಂದುವಾಗಿರುವುದೇ ದೊಡ್ಡಬಳ್ಳಾಪುರ. ಎತ್ತಿನಹೊಳೆಯಿಂದ ಪೈಪ್‌ಲೈನ್ ಮೂಲಕ ಹರಿದು ಬರುವ ನೀರು ಸಂಗ್ರಹವಾಗುವ ಡ್ಯಾಂ ನಿರ್ಮಾಣಕ್ಕಾಗಿ ತಾಲ್ಲೂಕಿನ ಸಾಸಲು ಹೋಬಳಿಯ ಮಚ್ಚೇನಹಳ್ಳಿ ಹಾಗೂ ಇದೇ ಗ್ರಾಮಕ್ಕೆ ಸಮೀಪದ ಕೊರಟೆಗೆರೆ ತಾಲ್ಲೂಕಿನ ಬೈರಗೊಂಡ್ಲು ಸಮೀಪ ಸ್ಥಳ ಗುರುತಿಸಲಾಗಿದೆ. ಎತ್ತಿನಹೊಳೆ ಪೈಪ್‌ಲೈನ್ ಕಾಮಗಾರಿ ಮುಕ್ತಾಯವಾಗಿದ್ದರೂ ಸಹ ನೀರು ಸಂಗ್ರಹದ ಡ್ಯಾಂ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೇ ಇನ್ನೂ ಮುಗಿದಿಲ್ಲ. ಆರ್ಥಿಕ ಮುಗ್ಗಟ್ಟಿನಿಂದ ಭೂಸ್ವಾಧಿನವಾಗದೇ ಇರುವುದೇ ಎತ್ತಿನಹೊಳೆ ಕಾಮಗಾರಿ ಕುಂಠಿತವಾಗಲು ಕಾರಣವಾಗಿದೆ. ಹಾಗಾಗಿ ರಾಜ್ಯ ಬಜೆಟ್‌ನಲ್ಲಿ ಎತ್ತಿನಹೊಳೆ ಯೋಜನೆಗೆ ಅಗತ್ಯವಿರುವ ಆರ್ಥಿಕ ನೆರವು ನೀಡುವ ಮೂಲಕ ಕಾಮಗಾರಿ ಶೀಘ್ರವಾಗಿ ಮುಕ್ತಾಯವಾಗುವಂತೆ ಮಾಡಬೇಕಿದೆ ಎನ್ನುತ್ತಾರೆ ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಸಿ.ಎಚ್.ರಾಮಕೃಷ್ಣ.
ನಗರಸಭೆ ಒಳಚರಂಡಿ ನೀರು, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಒಳಚರಂಡಿ ನೀರು ಹಾಗೂ ಕೈಗಾರಿಕಾ ಪ್ರದೇಶಗಳಿಂದ ತ್ಯಾಜ್ಯ ನೀರಿನಿಂದ ದೊಡ್ಡತುಮಕೂರು, ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ನೀರು ಕಲುಷಿತವಾಗಿವೆ. ಇದರಿಂದಾಗಿ ಅಂತರ್ಜಲವು ಸಹ ಕಲುಷಿತವಾಗಿದ್ದು ಈ ಭಾಗದ ಜನರು ಕುಡಿಯುವ ನೀರಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿಗಾಗಿ ಹೋರಾಟಗಳು ನಿರಂತರವಾಗಿ ನಡೆಯುತ್ತಲೇ ಇವೆ. ರಾಜ್ಯ ಬಜೆಟ್‌ನಲ್ಲಿ ಈ ಕೆರೆ ನೀರಿನ ಶುದ್ಧೀಕರಣ ಹಾಗೂ ಅಭಿವೃದ್ಧಿಗೆ ಹಣ ದೊರೆಯುವ ನಿರೀಕ್ಷೆಯಲ್ಲಿ ಜನತೆ ಇದ್ದಾರೆ.
ಬಿಬಿಎಂಪಿ ಕಸಕ್ಕೆ ದೊರೆಯುವುದೇ ಮುಕ್ತಿ ?
ಒಂದು ದಶಕದಿಂದಲೂ ಹಲವಾರು ಸಂಘಟನೆಗಳು ಹೋರಾಟಗಳನ್ನು ನಡೆಸುತ್ತಲೇ ಬಂದಿದ್ದರು ಸಹ ತಾಲ್ಲೂಕಿನ ದೊಡ್ಡ ಬೆಳವಂಗಲ ಹೋಬಳಿಗೆ ಬಿಬಿಎಂಪಿ ವ್ಯಾಪ್ತಿಯಿಂದ ಬಂದು ಬೀಳುತ್ತಿರುವ ಕಸದ ರಾಶಿ ಮಾತ್ರ ನಿಂತಿಲ್ಲ. ಪ್ರತಿ ಬಾರಿ ಹೋರಾಟಗಳು ನಡೆದಾಗಲೂ ಕಸ ಸ್ಥಗಿತಗೊಳಿಸುವ ಅಥವಾ ಕಸ ಕಂಟಕದಿಂದ ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ಭರವಸೆಗಳು ದೊರೆಯುತ್ತಿವೆ ಹೊರತು ಶಾಶ್ವತ ಪರಿಹಾರ ಮಾತ್ರ ಇದುವರೆಗೂ ಆಗಿಲ್ಲ. ಈ ಬಾರಿಯ ಬಜೆಟ್‌ನಲ್ಲಾದರೂ ಇಲ್ಲಿನ ಕಸ ವಿಲೇವಾರಿ ಘಟಕದ ಸುತ್ತಲು ತ್ಯಾಜ್ಯ ನೀರು ಕಸ ಹೊರ ಬಾರದಂತೆ ಗೋಡೆ ನಿರ್ಮಿಸುವ ಯೋಜನೆಗೆ ಹಣ ಮಂಜೂರಾತಿ ಮಾಡಿ ಕಸದಿಂದ ಆಗುತ್ತಿರುವ ತೊಂದರೆಗಳು ತಾತ್ಕಾಲಿಕವಾಗಿಯಾದರೂ ನಿವಾರಣೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಸ್ಥಳೀಯ ರೈತರಿದ್ದಾರೆ.
ಕಟ್ಟಡವೇ ಇಲ್ಲದ ಮಹಿಳಾ ಕಾಲೇಜು ಇಡೀ ಜಿಲ್ಲೆಗೆ ಏಕೈಕ ಮಹಿಳಾ ಪ್ರಥಮ ದರ್ಜೆ ಕಾಲೇಜು ಇರುವುದು ದೊಡ್ಡಬಳ್ಳಾಪುರದಲ್ಲಿ ಮಾತ್ರ. 2014ರಲ್ಲಿಯೇ ಕಾಲೇಜು ಪ್ರಾರಂಭವಾದರೂ ಇದುವರೆಗೂ ಸ್ವತಂತ್ರ ಕಟ್ಟಡ ಇಲ್ಲದೆ ಸರ್ಕಾರಿ ಪ್ರೌಢ ಶಾಲಾ ಕಟ್ಟಡದಲ್ಲಿನ ಐದಾರು ಕೊಠಡಿಗಳಲ್ಲೇ ತರಗತಿಗಳು ನಡೆಯುತ್ತಿವೆ. ಮಹಿಳಾ ಕಾಲೇಜು ಬಂದ್ ಮಾಡಬೇಕು ಇಲ್ಲವೇ ಸ್ವತಂತ್ರ ಕಟ್ಟಡ ನಿರ್ಮಿಸಿಕೊಡಬೇಕು ಎನ್ನುವ ಕೂಗು ದಶಕದಿಂದಲೂ ಕೇಳಿ ಬರುತ್ತಲೇ ಇದೆ. ಆದರೆ ಇದುವರೆಗೂ ಪ್ರತ್ಯೇಕ ಕಟ್ಟಡದ ಕನಸು ಮಾತ್ರ ನನಸಾಗಿಯೇ ಇಲ್ಲ. ಈ ಬಾರಿಯ ಬಜೆಟ್‌ನಲ್ಲಾದರೂ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಸ್ವಂತಂತ್ರ ಅಸ್ತಿತ್ವ ದೊರೆಯಬೇಕಿದೆ ಎನ್ನುವುದು ಮಹಿಳಾ ಪರ ಹೋರಾಟಗಾರರ ಒತ್ತಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.