ಆನೇಕಲ್: ತಾಲ್ಲೂಕಿನ ವಿವಿಧೆಡೆ ಕೆಂಪೇಗೌಡರ ಪುತ್ಥಳಿ ಅನಾವರಣ ಸಂಬಂಧದ ಮೃತ್ತಿಕೆ ಸಂಗ್ರಹ ರಥಯಾತ್ರೆ ಶುಕ್ರವಾರ ಸಂಚರಿಸಿತು. ಪ್ರತಿ ಗ್ರಾಮಗಳಲ್ಲೂ ಮಂಗಳ ಕಲಶಗಳು, ಜನಪದ ಕಲಾತಂಡಗಳು ರಥವನ್ನು ಬರಮಾಡಿಕೊಳ್ಳಲಾಯಿತು. ಎಲ್ಲೆಡೆ ಹಬ್ಬದ ವಾತಾವರಣನಿರ್ಮಾಣವಾಗಿತ್ತು.
ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ ಸೋಮಶೇಖರ್ ಮಾತನಾಡಿ, ನಾಡಪ್ರಭು ಕೆಂಪೇಗೌಡ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದ ದೂರದೃಷ್ಟಿಯ ನಾಯಕ. ಅವರ ಆದರ್ಶ, ಚಿಂತನೆಗಳನ್ನು ಯುವ ಸಮುದಾಯಕ್ಕೆ ತಲುಪಿಸಲು ರಥಯಾತ್ರೆ ಸಹಕಾರಿಯಾಗಿದೆ ಎಂದರು.
ಎಲ್ಲ ಸಮುದಾಯಗಳಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಬಳೇಪೇಟೆ, ತಿಗಳರ ಪೇಟೆ ಸೇರಿದಂತೆ ವಿವಿಧ ಪೇಟೆಗಳನ್ನು ಸ್ಥಾಪಿಸಿ, ವಾಣಿಜ್ಯ ವಹಿವಾಟುಗಳಿಗೆ ಅನುಕೂಲ ಮಾಡಿಕೊಟ್ಟಿದ್ದರು. ಕೆಂಪೇಗೌಡರ 108 ಅಡಿ ಪುತ್ಥಳಿಯನ್ನು ದೇವನಹಳ್ಳಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸುವ ಮೂಲಕ ರಾಜ್ಯ ಸರ್ಕಾರ ವಿಶ್ವಮಾನ್ಯತೆ ನೀಡಿದೆ ಎಂದರು.
ಕೆಂಪೇಗೌಡ ರಥಯಾತ್ರೆಯು ಐತಿಹಾಸಿಕವಾದದ್ದು. ಎಲ್ಲೆಡೆ ರಥಯಾತ್ರೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ನಾಡು ಕಟ್ಟಿದ ಕೆಂಪೇಗೌಡರಿಗೆ ಸಲ್ಲಿಸುವ ಗೌರವ ಇದಾಗಿದೆ ಎಂದು ಕರ್ಪೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನ್ನೂರು ಪಿ.ರಾಜು ಹೇಳಿದರು.
ವಿಧಾನ ಪರಿಷತ್ ಸದಸ್ಯ ಗೋಪಿನಾಥರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್, ಬಿಜೆಪಿ ಮಂಡಲ ಅಧ್ಯಕ್ಷ ಮುನಿರಾಜು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೃಷ್ಣಪ್ಪ ನಾಗಮ್ಮ, ಮುಖಂಡ ಬಂಡಾಪುರ ರಾಮಚಂದ್ರ, ಟಿ.ವಿ.ಬಾಬು, ಎನ್. ಶಂಕರ್, ಎಂ. ರಾಮಕೃಷ್ಣ, ಸಿಡಿಹೊಸಕೋಟೆ ರವಿ, ಸುರೇಶ್‌ರೆಡ್ಡಿ, ನಾಗನಾಯಕನಹಳ್ಳಿ ರಾಧಾಕೃಷ್ಣ, ಮುನಿರತ್ನಮ್ಮ ನಾರಾಯಣ್, ಹಾಲ್ದೇನಹಳ್ಳಿ ತಿಮ್ಮರಾಜು, ಸರಿತಾ ವೆಂಕಟಸ್ವಾಮಿ, ರಶ್ಮಿ ಅನಿಲ್, ಬಿದರಗೆರೆ ಚಿನ್ನಪ್ಪ, ಮಣಿಕಂಠ, ರಾಮಕೃಷ್ಣ ರೆಡ್ಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುರಳಿ ಇದ್ದರು.
ಕೆಂಪೇಗೌಡ ರಥವು ತಾಲ್ಲೂಕಿನ ಮರಸೂರು ಗ್ರಾಮ, ಮಡಿವಾಳದ ಬಂಡಿ ಮಹಾಕಾಳಿ ದೇವಾಲಯ, ಮಾಯಸಂದ್ರ ಪಿಳ್ಳಪ್ಪ ಸ್ವಾಮಿ ದೇವಾಲಯ, ಕರ್ಪೂರು, ಆನೇಕಲ್, ಸಮಂದೂರು, ಬಳ್ಳೂರು, ಚಿಕ್ಕಹೊಸಹಳ್ಳಿ, ಇಂಡ್ಲವಾಡಿ ಕ್ರಾಸ್, ಸುರಗಜಕ್ಕನಹಳ್ಳಿ, ಸಿಡಿಹೊಸಕೋಟೆ ಮತ್ತು ಬ್ಯಾಗಡದೇನಹಳ್ಳಿ ಗ್ರಾಮಗಳಲ್ಲಿ ಸಂಚರಿಸಿತು.
ಮಹಿಳೆಯರು ಮಂಗಲ ಕಲಶಗಳನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ವೀರಗಾಸೆ, ಡೊಳ್ಳುಕುಣಿತ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಪಾಲ್ಗೊಂಡಿದ್ದವು. ರಥಯಾತ್ರೆಗೆ ಪುಷ್ಪವೃಷ್ಟಿ ಮಾಡುವ ಮೂಲಕ ಎಲ್ಲೆಡೆ ಸಂಭ್ರಮದ ಸ್ವಾಗತ ನೀಡಲಾಯಿತು. ಮಾಯಸಂದ್ರ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ಆಕರ್ಷಣೀಯವಾಗಿತ್ತು. ಕರ್ಪೂರು ಗ್ರಾಮದಲ್ಲಿ ಜೆಸಿಬಿ ಮೂಲಕ ಪುಷ್ಪವೃಷ್ಟಿ ಮಾಡಿ ರಥವನ್ನು ಬರಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.