ವಿಜಯಪುರ(ದೇವನಹಳ್ಳಿ): ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ನಡೆಯಿತು. ಪುರಸಭೆ ಅಧ್ಯಕ್ಷೆ ವಿಮಲಾ ಬಸವರಾಜ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿಗೆ ಚಾಲನೆ ನೀಡಿದರು.
ನಾಡುಕಟ್ಟಲು ಕೆಂಪೇಗೌಡರಲ್ಲಿ ಇದ್ದ ಪಾಂಡಿತ್ಯ ನಾವೆಲ್ಲರೂ ಅಧ್ಯಯನ ಮಾಡಬೇಕು. ಒಂದು ಪಟ್ಟಣ ಹೇಗಿರಬೇಕು ಎನ್ನುವ ಪರಿಕಲ್ಪನೆ ಇಟ್ಟುಕೊಂಡಿದ್ದ ಅವರು ನಮ್ಮೆಲ್ಲರಿಗೂ ಉತ್ತಮ ಮಾರ್ಗದರ್ಶಕರಾಗಿದ್ದಾರೆ. ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದರು.
ಪುರಸಭಾ ಸದಸ್ಯ ಎ.ಆರ್.ಹನೀಪುಲ್ಲಾ ಮಾತನಾಡಿ, ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು ಎಂದು ಅಂಬೇಡ್ಕರ್ ಹೇಳಿದ್ದಾರೆ. ಈ ಮಾತು ಅಕ್ಷರಶಃ ಸತ್ಯ. ಇತಿಹಾಸ ಸೃಷ್ಟಿಸಲು ಮಹತ್ವ ಸಾಧನೆ ಬೇಕಿಲ್ಲ. ಮನೋಭೂಮಿಕೆ ಬೇಕು. ಅಂತಹ ದೃಢ ಮನಃಸ್ಥಿತಿಯಿಂದ ಕೆಂಪೇಗೌಡ ಬೆಂಗಳೂರು ನಿರ್ಮಿಸಿದ್ದೇ ಒಂದು ದೊಡ್ಡ ಇತಿಹಾಸ. ಅವರನ್ನು ಒಕ್ಕಲಿಗ ಸಮುದಾಯಕ್ಕೆ ಸೀಮಿತಗೊಳಿಸುವುದು ಬೇಡ. ಒಕ್ಕಲಿಗ ಸಂಸ್ಕೃತಿ ಪ್ರತೀಕವಾಗಿರುವ ಅವರು ಜಾತ್ಯತೀತರು. ಅದಕ್ಕೆ ಅವರು ಮಾಡಿರುವ ಕೆಲಸ ಕಾರ್ಯಗಳೇ ಸಾಕ್ಷಿ. ದೂರದೃಷ್ಟಿತ್ವದ ವ್ಯಕ್ತಿತ್ವದಿಂದಾಗಿ ನಾಡಪ್ರಭು ಆಗಿದ್ದಾರೆ ಎಂದರು.
ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್ ಮಾತನಾಡಿ, ಎಲ್ಲರನ್ನೂ ಒಳಗೊಳ್ಳುವ ದೂರದರ್ಶಿತ್ವದ ಆಡಳಿತ ನೀಡಿದ ಕೆಂಪೇಗೌಡರ ಆಡಳಿತ ಇಂದಿಗೂ ಮಾದರಿಯಾಗಿದೆ. ನೀರಿನ ಸೌಲಭ್ಯ, ಬಯಲು ಪ್ರದೇಶ, ಹಲವು ಕೆರೆಗಳಿಂದ ಆವೃತವಾಗಿದ್ದ ಬೆಂಗಳೂರನ್ನು ಭೌಗೋಳಿಕ ಆಧಾರದ ಮೇಲೆ ನಿರ್ಮಾಣ ಮಾಡಿದ ಅವರು, ವಿಶ್ವದಲ್ಲೇ ಬೆಂಗಳೂರು ಪ್ರಸಿದ್ಧಿಯಾಗುವಂತೆ ಮಾಡಿದ್ದಾರೆ. ಅರಳೇಪೇಟೆ, ಬಳೆಪೇಟೆ, ತಿಗಳರಪೇಟೆ, ಚಿಕ್ಕಪೇಟೆ, ನಗರ್ತಪೇಟೆ, ಸೇರಿದಂತೆ ವಿವಿಧ ವೃತ್ತಿಗಳ ಹೆಸರಿನಲ್ಲಿ 50ಕ್ಕೂ ಹೆಚ್ಚು ಪೇಟೆಗಳನ್ನು ನಿರ್ಮಿಸಿ ಬೆಂಗಳೂರನ್ನು ವಾಣಿಜ್ಯ ನಗರವನ್ನಾಗಿ ಮಾಡಿದ್ದಾರೆ. ಕೃಷಿಗೆ ಪೂರಕ ಚಟುವಟಿಕೆಗಳಿಗೆ ಸ್ಥಾನ ಕಲ್ಪಿಸಿದ್ದಾರೆ. ಇಂತಹ ಮಹನೀಯರ ಆಡಳಿತ ಕಾರ್ಯವೈಖರಿ ಮಾದರಿಯಾಗಬೇಕು ಎಂದರು.
ಪುರಸಭಾ ಉಪಾಧ್ಯಕ್ಷ ಎಂ.ಕೇಶವಪ್ಪ, ಸದಸ್ಯರಾದ ಸಿ.ನಾರಾಯಣಸ್ವಾಮಿ, ರಾಜೇಶ್ವರಿ ಭಾಸ್ಕರ್, ಭೈರೇಗೌಡ, ವಿ.ನಂದಕುಮಾರ್, ಸಿ.ಎಂ.ರಾಮು, ಕವಿತ, ಶಿಲ್ಪಾಅಜಿತ್, ಎಂ.ನಾರಾಯಣಸ್ವಾಮಿ, ಶ್ರೀರಾಮ್, ಹಾಗೂ ಮುಖಂಡರಾದ ಎಂ.ವೀರಣ್ಣ, ಬಚ್ಚೇಗೌಡ, ಆರ್.ಎಂ.ಸಿಟಿ ಮಂಜುನಾಥ್, ಮಹೇಶ್ ಕುಮಾರ್, ಪುರಸಭೆ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.