ADVERTISEMENT

ಕೆಂಪೇಗೌಡ ಸ್ಮಾರಕಕ್ಕೆ ಶೀಘ್ರ ಶಂಕುಸ್ಥಾಪನೆ

₹10 ಕೋಟಿ ಅನುದಾನಕ್ಕೆ ಬೇಡಿಕೆ; ಸಚಿವ ಕೆ.ಎಚ್‌.ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 14:48 IST
Last Updated 7 ಜುಲೈ 2024, 14:48 IST
ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಸಚಿವ ಕೆ.ಎಚ್‌.ಮುನಿಯಪ್ಪ, ಚಂದ್ರಶೇಖರನಾಥಸ್ವಾಮೀಜಿ ಉದ್ಘಾಟಿಸಿದರು
ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಸಚಿವ ಕೆ.ಎಚ್‌.ಮುನಿಯಪ್ಪ, ಚಂದ್ರಶೇಖರನಾಥಸ್ವಾಮೀಜಿ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ: ದೇವನಹಳ್ಳಿ ಸಮೀಪದ ಆವತಿಯಲ್ಲಿ ಕೆಂಪೇಗೌಡ ಅವರ ಸ್ಮಾರಕ, ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಶೀಘ್ರದಲ್ಲೆ ಶಂಕುಸ್ಥಾಪನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

ಕೆಂಪೇಗೌಡ ಜಯಂತ್ಯುತ್ಸವ ಆಚರಣ ಸಮಿತಿ ವತಿಯಿಂದ ನಗರದ ಒಕ್ಕಲಿಗರ ಸಮುದಯ ಭವನದಲ್ಲಿ ಭಾನುವಾರ ನಡೆದ ನಾಡಪ್ರಭು ಕೆಂಪೇಗೌಡರ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಕೆಂಪೇಗೌಡ ಸ್ಮಾರಕ ನಿರ್ಮಾಣ ಮತ್ತು ಅಭಿವೃದ್ಧಿ ಕೆಲಸಗಳಿಗಾಗಿ ₹10 ಕೋಟಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಜಿಲ್ಲೆಯ ನಾಲ್ಕು ತಾಲ್ಲೂಕಿನ ಒಕ್ಕಲಿಗ ಸಮುದಾಯ ಅಗತ್ಯ ಸಹಕಾರ ನೀಡುವುದರೊಂದಿಗೆ ಕಾರ್ಯಕ್ರಮಕ್ಕೆ ಜೊತೆಯಾಗಬೇಕು. ಅಭಿವೃದ್ದಿ ವಿಚಾರದಲ್ಲಿ ಯಾವುದೇ ಪಕ್ಷ,ವರ್ಗಗಳ ಬೇಧ ಸಲ್ಲದು ಎಂದರು.

ADVERTISEMENT

ದೊಡ್ಡಬಳ್ಳಾಪುರದದಲ್ಲಿ ಸ್ಥಗಿತಗೊಂಡಿರುವ ಕೆಲಸಗಳಿಗೆ ಚಾಲನೆ ನೀಡಿ ಅಭಿವೃದ್ದಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ನೆಮ್ಮದಿ ಎನ್ನುವುದು ಹಣದಿಂದ ಬರುವುದಿಲ್ಲ. ಉತ್ತಮ ಗುಣ ಸಂಸ್ಕಾರಗಳನ್ನು ಪೋಷಕರು ಮಕ್ಕಳಿಗೆ ಕಲಿಸಬೇಕು ಎಂದರು.

ಶಾಸಕ ಧೀರಜ್‌ ಮುನಿರಾಜು ಮಾತನಾಡಿ, ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಯೋಜನೆಗಳ ಫಲವಾಗಿ ಬೆಂಗಳೂರು ತಂತ್ರಜ್ಞಾನ, ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಬೆಂಗಳೂರು ನದಿ ಅಥವಾ ಸಮುದ್ರದ ದಂಡೆಗಳಲ್ಲಿ ಇಲ್ಲದಿದ್ದರೂ ವಿಶಿಷ್ಟವಾಗಿ ಬೆಳೆದಿದೆ. ರಾಜ್ಯದ ಶೇ 70ರಷ್ಟು ತೆರಿಗೆ ಬೆಂಗಳೂರು ಮತ್ತು ಗ್ರಾಮಾಂತರದಿಂದಲೇ ಸಂದಾಯವಾಗುತ್ತದೆ ಎಂದರು.

ಕೆಂಪೇಗೌಡರ ವಿಚಾರಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು. ಶಾಲಾ ಮಕ್ಕಳಿಗೆ ಉಪನ್ಯಾಸಗಳ ಮೂಲಕ ತಿಳಿಸುವ ಕೆಲಸವಾಗಬೇಕು ಎಂದರು.

ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಕೃಷ್ಣಪ್ಪ, ಕೆಂಪೇಗೌಡ ಜಯಂತ್ಯುತ್ಸವ ಆಚರಣ ಸಮಿತಿ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ, ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ, ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ದೊಡ್ಡಬಳ್ಳಾಪುರ ಯೋಜನಾ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ.ಚುಂಚೇಗೌಡ, ಕರ್ನಾಟಕ ರಾಜ್ಯ ತೆಂಗಿನ ನಾರು ಸಹಕಾರ ಮಂಡಲಿ ಅಧ್ಯಕ್ಷ ವೆಂಕಟೇಶ್‌ಬಾಬು, ಟಿಎಪಿಎಂಸಿಎಸ್‌ ಅಧ್ಯಕ್ಷ ಮಾರೇಗೌಡ, ನಿರ್ದೇಶಕರಾದ ಡಿ.ಸಿದ್ದರಾಮಣ್ಣ,ಎನ್‌.ರಂಗಪ್ಪ, ವಿ.ಅಂಜನಗೌಡ, ನಗರಸಭೆ ಸದಸ್ಯರಾದ ಬಂತಿ ವೆಂಕಟೇಶ್, ಪದ್ಮನಾಭ್, ಎ.ನರಸಿಂಹಯ್ಯ, ಸಿ.ಡಿ.ಸತ್ಯನಾರಾಯಣಗೌಡ, ಎಚ್‌.ಅಪ್ಪಯ್ಯಣ್ಣ, ತಿ.ರಂಗರಾಜು, ಬಿ.ಸಿ.ಆನಂದಕುಮಾರ್, ಡಾ.ಎಚ್‌.ಜಿ.ವಿಜಯಕುಮಾರ್, ಎಸ್‌.ಎಂ.ಹರೀಶ್‌ಗೌಡ,ಕೆ.ಎಂ.ಮುನಿರಾಮೇಗೌಡ, ಲಕ್ಷ್ಮೀಪತಯ್ಯ, ಬಿ.ಸಿ.ವೆಂಕಟೇಶ್, ಬಿ.ಸಿ.ನಾರಾಯಣಸ್ವಾಮಿ, ಕಲ್ಪನಾಆನಂದ್‌, ಶಾಂತಮ್ಮ, ಚಿಕ್ಕರಾಮಕೃಷ್ಣಪ್ಪ ಇದ್ದರು.

ದೊಡ್ಡಬಳ್ಳಾಪುರದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಕೆಂಪೇಗೌಡ ಮೂರ್ತಿಯ  ಮೆರವಣಿಗೆ ವಿವಿಧ ಕಲಾತಂಡಗಳೊಡನೆ ನಡೆಯಿತು

ಅದ್ದೂರಿ ಮೆರವಣಿಗೆ

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ನೆಲದಾಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಪ್ರಾರಂಭವಾದ ಮೆರವಣಿಗೆಗೆ ಸಂಸತ್‌ ಸದಸ್ಯ ಡಾ.ಕೆ.ಸುಧಾಕರ್‌ ಚಾಲನೆ ನೀಡಿದರು. ಒಕ್ಕಲಿಗರ ಭವನದದವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಕೆಂಪೇಗೌಡ ಮೂರ್ತಿಯ ಉತ್ಸವ ವಿವಿಧ ಕಲಾತಂಡಗಳೊಡನೆ ನಡೆಯಿತು. ಹಾಡೋನಹಳ್ಳಿ ವೀರಾಪುರ ಗ್ರಾಮಸ್ಥರು ಕೆಂಪೇಗೌಡರ ಪುತ್ಥಳಿಯನ್ನ ಮೆರವಣಿಗೆಗೆ ಕರೆತಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.