ADVERTISEMENT

ದೇವನಹಳ್ಳಿ: ಹೊಟ್ಟೆಯಲ್ಲಿದ್ದ ₹20 ಕೋಟಿ ಮೌಲ್ಯದ ಕೋಕೆನ್ ಕ್ಯಾಪ್ಸೂಲ್‌ ವಶ

ಸಿಕ್ಕಿಬಿದ್ದ ನೈಜೀರಿಯಾ ಡ್ರಗ್‌ ಪೆಡ್ಲರ್‌

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2023, 0:42 IST
Last Updated 21 ಡಿಸೆಂಬರ್ 2023, 0:42 IST
ವಶಕ್ಕೆ ಪಡೆದಿರುವ ಕೊಕೇನ್‌ ತುಂಬಿದ್ದ ಕ್ಯಾಪ್ಸೂಲ್‌
ವಶಕ್ಕೆ ಪಡೆದಿರುವ ಕೊಕೇನ್‌ ತುಂಬಿದ್ದ ಕ್ಯಾಪ್ಸೂಲ್‌   

ದೇವನಹಳ್ಳಿ: ಇಲ್ಲಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೈಜೀರಿಯಾದ ಡ್ರಗ್‌ ಪೆಡ್ಲರ್‌ನನ್ನು ಬಂಧಿಸಿರುವ  ವೈಮಾನಿಕ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ₹20 ಕೋಟಿಗೂ ಹೆಚ್ಚು ಮೌಲ್ಯದ ಎರಡು ಕೆ.ಜಿ. ಮಾದಕವಸ್ತು (ಕೊಕೇನ್‌) ವಶಪಡಿಸಿಕೊಂಡಿದ್ದಾರೆ.

ಡಿ.11ರಂದು ಇಥಿಯೋಪಿಯಾ ಏರ್‌ಲೈನ್ಸ್‌ನಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಆರೋಪಿಯನ್ನು ಸಿಬ್ಬಂದಿ ತಪಾಸಣೆ ನಡೆಸಿದಾಗ ಆತನ ಹೊಟ್ಟೆಯಲ್ಲಿ ಕೊಕೇನ್‌ ತುಂಬಿದ್ದ 99 ಕ್ಯಾಪ್ಸೂಲ್‌ ಪತ್ತೆಯಾಗಿದ್ದವು.

ಇಥಿಯೋಪಿಯಾ ರಾಜಧಾನಿ ಅದಿಸ್‌ ಅಬಾಬಾದಿಂದ ವೈದ್ಯಕೀಯ ವೀಸಾದ ಮೇಲೆ ಬೆಂಗಳೂರಿಗೆ ಹೊರಟಿದ್ದ 40 ವರ್ಷದ ಆರೋಪಿಯ ಬಗ್ಗೆ ಭಾರತದ ವೈಮಾನಿಕ ಗುಪ್ತಚರ ತಂಡಕ್ಕೆ ಮಾದಕವಸ್ತು ಕಳ್ಳ ಸಾಗಾಟದ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು.   

ADVERTISEMENT

ಬೆಂಗಳೂರು ನಿಲ್ದಾಣದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದ ಅಧಿಕಾರಿಗಳು ಆತನನ್ನು ಐದು ದಿನ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಆತನ ಹೊಟ್ಟೆಯಿಂದ 99 ಕೊಕೇನ್ ತುಂಬಿದ ಕ್ಯಾಪ್ಸೂಲ್‌ಗಳನ್ನು ಹೊರಕ್ಕೆ ತೆಗೆಯಲಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾರಾಟ ಮಾಡಲು ಕೊಕೇನ್‌ ಕಳ್ಳ ಸಾಗಾಟ ಮಾಡುತ್ತಿದ್ದ ಆತ ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.