ADVERTISEMENT

ಹೊಸಕೋಟೆ | ರಾಜಧಾನಿಗೆ ನೆಂಟಸ್ತನ; ಬಸ್‌ಗೆ ಬಡತನ

ಹೊಸಕೋಟೆ – ತಿರುಮಲಶೆಟ್ಟಿಹಳ್ಳಿ ಕ್ರಾಸ್ ಮಾರ್ಗದಲ್ಲಿ ಬಸ್ ಕೊರತೆ

ಎನ್.ಡಿ.ವೆಂಕಟೇಶ್‌
Published 1 ಜುಲೈ 2024, 8:47 IST
Last Updated 1 ಜುಲೈ 2024, 8:47 IST
<div class="paragraphs"><p>ಹೊಸಕೋಟೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ತಿರುಮಲಶೆಟ್ಟಿಹಳ್ಳಿ ಕ್ರಾಸ್ ಕಡೆ ತೆರಳಲು ಕಾದಿರುವ ಪ್ರಯಾಣಿಕರು</p></div>

ಹೊಸಕೋಟೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ತಿರುಮಲಶೆಟ್ಟಿಹಳ್ಳಿ ಕ್ರಾಸ್ ಕಡೆ ತೆರಳಲು ಕಾದಿರುವ ಪ್ರಯಾಣಿಕರು

   

ಹೊಸಕೋಟೆ: ನಗರದಿಂದ ತಿರುಮಲಶೆಟ್ಟಿಹಳ್ಳಿ ಕ್ರಾಸ್ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಈ ಮಾರ್ಗದಲ್ಲಿ ಹತ್ತಾರು ಹಳ್ಳಿಗಳು ಇವೆ. ಪ್ರತಿಯೊಂದು ಕೆಲಸಕ್ಕೂ ಹೊಸಕೋಟೆ ನಗರವನ್ನೇ ಆಶ್ರಯಿಸಬೇಕಾಗಿದೆ.

ಈ ಮಾರ್ಗದಲ್ಲಿ ಪ್ರಮುಖವಾಗಿ ದೊಡ್ಡಗಟ್ಟಿಗನಬ್ಬೆ, ಚಿಕ್ಕಗಟ್ಟಿಗನಬ್ಬೆ, ಗಣಗಲು, ಸರ್ಕಾರ್ ಗುಟ್ಟಹಳ್ಳಿ, ಕೊರಳೂರು, ಕೆ.ಮಲ್ಲಸಂದ್ರ ಸೇರಿದಂತೆ ಇನ್ನೂ ಹಲವು ಗ್ರಾಮಗಳು ಇವೆ. ಈ ಎಲ್ಲ ಗ್ರಾಮಗಳಿಂದಲೂ ಒಂದಲ್ಲ ಒಂದು ಕೆಲಸಕ್ಕೆ ತಾಲ್ಲೂಕು ಕೇಂದ್ರಕ್ಕೆ ಪ್ರತಿನಿತ್ಯ ಸಂಚಾರ ಮಾಡಬೇಕಾಗಿದೆ. ಆದರೆ ದ್ವಿಚಕ್ರ ವಾಹನ, ಕಾರು ಮತ್ತಿತರ ವಾಹನ ಸೌಲಭ್ಯ ಇಲ್ಲದಿರುವ ಪ್ರಯಾಣಿಕರಿಗೆ ಹೊಸಕೋಟೆಗೆ ಬಂದು ವಾಪಸ್ ಹೋಗುವುದು ಒಂದು ಸವಾಲಿನ ಕೆಲಸ.

ADVERTISEMENT

ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆಗೆ ತಲುಪುವುದೇ ಸವಾಲು. ಈ ಮಾರ್ಗದಲ್ಲಿ ಮುಖ್ಯವಾಗಿ ದೊಡ್ಡಗಟ್ಟಿಗನಬ್ಬೆ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಇದೆ. ಕೆ.ಮಲ್ಲಸಂದ್ರ ಗ್ರಾಮದಲ್ಲಿ 1ರಿಂದ 8ನೇ ತರಗತಿವರೆಗೆ ಶಾಲೆ. ಈ ಭಾಗದಿಂದ ಮಲ್ಲಸಂದ್ರಕ್ಕೆ ಮತ್ತು ಮಲ್ಲಸಂದ್ರ ಭಾಗದಿಂದ ದೊಡ್ಡಗಟ್ಟಿಗಬ್ಬೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಬಸ್ ವ್ಯವಸ್ಥೆ ಇಲ್ಲದಂತಾಗಿದೆ. ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆಗೆ ತಲುಪಲು ಹರಸಾಹಸಪಡಬೇಕಾಗಿದೆ.

ಕಾರ್ಮಿಕರಿಗೂ ತೊಂದರೆ: ಇಲ್ಲಿ ಕೆಲಸ ಮಾಡಲು ಹೊಸಕೋಟೆ ಕಡೆಯಿಂದ ಬರುವ ಕಾರ್ಮಿಕರಿಗೂ ಸಹ ಸಮಸ್ಯೆ ಹೇಳತೀರದಾಗಿದೆ. ಪ್ರತಿನಿತ್ಯ ಹೊಸಕೋಟೆ ನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಿಂತು ಸಿಕ್ಕಸಿಕ್ಕ ವಾಹನ ಏರಿಕೊಂಡು ಹೋಗಬೇಕಾಗಿದೆ.

ಹೊಸಕೋಟೆ ತಾಲ್ಲೂಕು ವ್ಯಾಪಿಯು ಕಸಬಾ, ಅನುಗೊಂಡನಹಳ್ಳಿ ಒಳಗೊಂಡಂತೆ ಚಿಕ್ಕತಿರುಪತಿವರೆಗೂ ಹರಡಿದೆ. ಆದರೆ, ಈ ಮಾರ್ಗದಲ್ಲಿ ತಾಲ್ಲೂಕು ಕೆಂದ್ರದಿಂದ ಮಾತ್ರ ಬಸ್ ವ್ಯವಸ್ಥೆ ಇಲ್ಲ. ಆದರೆ, ಬೆಂಗಳೂರಿನಿಂದ ಕ್ಷಣಕ್ಕೊಂದು ಬಸ್ ವ್ಯವಸ್ಥೆ ಇದೆ. ಆದ್ದರಿಂದ ಹೊಸಕೋಟೆಯಿಂದ ತಿರುಮಲಶೆಟ್ಟಿಹಳ್ಳಿ ಕ್ರಾಸ್‌ವರೆಗೆ ಸಂಪರ್ಕ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಅನುಕೂಲವಾಗಲಿದೆ ಎಂಬುದು ಈ ಭಾಗದ ಪ್ರಯಾಣಿಕರ ಒಕ್ಕೂರಲ ಮನವಿ.

ವ್ಯವಸ್ಥೆಗೆ ಮನವಿ

ತಾಲ್ಲೂಕು ಕೇಂದ್ರಕ್ಕೆ ಇಲ್ಲಿಂದ ಸೂಕ್ತ ಸಂಪರ್ಕ ವ್ಯವಸ್ಥೆ ಇಲ್ಲ. ಒಮ್ಮೊಮ್ಮೆ ಹೊಸಕೋಟೆಗೆ ಓಫಾರಂ ಮಾರ್ಗವಾಗಿ ಸುತ್ತಿಕೊಂಡು ಹೋಗಬೇಕು. ಅನಿವಾರ್ಯವಾದಾಗ ದುಪ್ಪಟ್ಟು ಹಣ ಕೊಟ್ಟು ಆಟೊ, ಟ್ಯಾಕ್ಸಿ ಹಿಡಿದುಕೊಂಡು ಹೋಗಬೇಕು. ಸೂಕ್ತ ಬಸ್ ವ್ಯವಸ್ಥೆ ಹೊಸಕೋಟೆಯಿಂದ ಕಲ್ಪಿಸಲು ಸಂಬಂಧಿಸಿದ ಅಧಿಕಾರಿ ಮತ್ತು ಜನಪ್ರತಿನಿಧಿಗಳಲ್ಲಿ ಮನವಿ ಮಾಡಲಾಗುವುದು.

ಸುಮಿತ್ರ, ಗೃಹಿಣಿ, ಕೊರಳೂರು, ಹೊಸಕೋಟೆ ತಾಲ್ಲೂಕು

ಸದಾ ಅಪಘಾತದ ಭಯ

ದೊಡ್ಡಗಟ್ಟಿಗನಗ್ಗೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇಲ್ಲಿಗೆ ಕೆ.ಮಲ್ಲಸಂದ್ರ ಕಡೆಯಿಂದಲೇ ಹೆಚ್ಚಿನ ಸಂಖ್ಯೆ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ, ಈ ಭಾಗದಿಂದ ಸೂಕ್ತ ಬಸ್ ವ್ಯವಸ್ಥೆ ಇಲ್ಲದ ಕಾರಣ ಒಮ್ಮೊಮ್ಮೆ ವಿದ್ಯಾರ್ಥಿಗಳು ನಡೆದುಕೊಂಡೇ ಹೋಗುತ್ತಾರೆ. ಈ ರಸ್ತೆಯಲ್ಲಿ ಬೃಹತ್ ವಾಹನಗಳ ದಟ್ಟಣೆ ಹೆಚ್ಚಿದೆ. ಆದ್ದರಿಂದ ಅಪಘಾತದ ಭಯ ಸದಾ ಕಾಡುತ್ತಲೇ ಇರುತ್ತದೆ.

ಸುಮಾ, ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ದೊಡ್ಡಗಟ್ಟಿಗನಬ್ಬೆ

ಕಾಳಜಿ ಇದ್ದರೆ ಸರಿಪಡಿಸಲಿ

ಬೆಂಗಳೂರು ನಗರಕ್ಕೆ ಅಂಟಿಕೊಂಡಂತೆ ಇದ್ದರೂ ತಾಲ್ಲೂಕು ಕೇಂದ್ರಕ್ಕೆ ಹೋಗಿ ಬರಲು ಪರದಾಡುವ ಸ್ಥಿತಿ ಇರುವುದು ನಿಜಕ್ಕೂ ಶೋಚನೀಯ. ಈ ಸಮಸ್ಯೆ ಕುರಿತು ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರಿಗೆ, ಹಾಲಿ ಶಾಸಕ ಶರತ್ ಬಚ್ಚೇಗೌಡ ಅವರಿಗೆ ಮತ್ತು ತಹಶೀಲ್ದಾರ್ ಅವರಿಗೂ ದೂರು ನೀಡಲಾಗಿದೆ. ಆದರೆ, ಇದುವರೆಗೂ ಯಾವುದೇ ಕ್ರಮ ಆಗಿಲ್ಲ. ಸಮಸ್ಯೆ ಕುರಿತು ಕಣ್ಮುಚ್ಚಿ ಕುಳಿತಿರುವುದು ತರವಲ್ಲ. ನಿಜವಾಗಿಯೂ ಜನಪರ ಕಾಳಜಿ ಇದ್ದರೆ ಈ ಸಮಸ್ಯೆ ಈ ಕೂಡಲೇ ಸರಿಪಡಿಸಲಿ.

ಎ.ಮುನಿರಾಜು, ಅಧ್ಯಕ್ಷ, ಜಾಂಬವ ಯುವಸೇನೆ ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.