ದೊಡ್ಡಬಳ್ಳಾಪುರ: ಶಿವಮೊಗ್ಗ,ಚಿಕ್ಕಬಳ್ಳಾಪುರ ಜಿಲ್ಲೆಯ ಕಲ್ಲುಗಣಿಗಳಲ್ಲಿ ಜಿಲೆಟಿನ್ ಸ್ಫೋಟಗೊಂಡು ಕಾರ್ಮಿಕರು ಮೃತಪಟ್ಟ ಘಟನೆ ನಂತರ ಗಣಿಗಾರಿಕೆ ಸ್ಥಗಿತವಾಗಿದೆ. ಇದರಿಂದಾಗಿ ಮನೆ ನಿರ್ಮಾಣಕ್ಕೆ ಎಂಸ್ಯಾಂಡ್ ಸಿಗದೆ ಕಟ್ಟಡ ನಿರ್ಮಾಣ ಕೆಲಸಗಳು ಸ್ಥಗಿತಗೊಂಡಿದ್ದು ಕಾರ್ಮಿಕರ ಬದುಕು ಬೀದಿಗೆ ಬೀಳುತ್ತಿದ್ದರೆ, ಕಟ್ಟಡ ನಿರ್ಮಾಣ ಮಾಲೀಕರ ಜೋಬು ಖಾಲಿಯಾಗುತ್ತಿದೆ.
ಮರಳು ಬಂದ್ ಆದ ನಂತರ ಕಟ್ಟಡ ನಿರ್ಮಾಣ ಕಾಮಗಾರಿ ಇಂದು ಸಂಪೂರ್ಣವಾಗಿ ಕಲ್ಲುಗಣಿಗಾರಿಕೆಯಿಂದ ಬರುವ ಎಂಸ್ಯಾಂಡ್ ಮೇಲೆಯೇ ಅವಲಂಬಿತವಾಗಿದೆ. ಕಟ್ಟಡ ನಿರ್ಮಾಣ, ಕಟ್ಟಡಕ್ಕೆ ಬಳಿಯುವ (ಪ್ಲಾಸ್ಟಿಂಗ್‌ಗೆ ಬಳಸುವ) ವಾಷಿಂಗ್ ಸ್ಯಾಂಡ್ ಸೇರಿದಂತೆ ಕಟ್ಟಡಕ್ಕೆ ಸಕ್ರಮ ಕಲ್ಲುಗಣಿಗಾರಿಕೆ ತುರ್ತು ಅಗತ್ಯವಾಗಿದೆ.
ಶಿವಮೊಗ್ಗ,ಚಿಕ್ಕಬಳ್ಳಾಪುರದಲ್ಲಿನ ಕಲ್ಲುಗಣಿಗಳಲ್ಲಿ ಕಾರ್ಮಿಕರು ಮೃತಪಟ್ಟ ಘಟನೆ ನಡೆಯುವುದಕ್ಕೂ ಹಿಂದೆ ಒಂದು ಟನ್ ಎಂಸ್ಯಾಂಡ್ ಕಲ್ಲಿನ ಕ್ವಾರಿ ಸಮೀಪ ₹450, ಒಂದು ಟನ್ ವಾಷಿಂಗ್‌ಸ್ಯಾಂಡ್ ₹850 ರಿಂದ ₹900 ಇತ್ತು. ಆದರೆ, ಕಲ್ಲು ಗಣಿಗಾರಿಕೆಯಲ್ಲಿನ ಸ್ಫೋಟದಿಂದ ಕಾರ್ಮಿಕರು ಮೃತಪಟ್ಟ ಘಟನೆ ನಂತರ ಒಂದು ಟನ್ ಎಂಸ್ಯಾಂಡ್ ₹800, ವಾಷಿಂಗ್‌ಸ್ಯಾಂಡ್ ₹1,450ಗಳಿಗೆ ಏರಿಕೆಯಾಗಿದೆ.
ಹಣ ನೀಡಿದರು ಎಂಸ್ಯಾಂಡ್ ಇಲ್ಲ: ಅರೆಬರೆ ಕೆಲಸವಾಗಿದೆ. ಕೆಲಸ ನಿಲ್ಲಿಸಿದರೆ ಮತ್ತೆ ಕಾರ್ಮಿಕರು ಬರುವುದಿಲ್ಲ ಎನ್ನುವ ಆತಂಕ. ಹೀಗಾಗಿ ಹಣ ಹೆಚ್ಚಾಗಿ ನೀಡಿಯಾದರೂ ಎಂಸ್ಯಾಂಡ್ ಸಿಗದಂತಾಗಿದೆ. ಕಲ್ಲುಗಣಿಗಾರಿಕೆ ಸ್ಥಗಿತವಾಗಿದ್ದರಿಂದ ಕಟ್ಟಡ ನಿರ್ಮಾಣದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎನ್ನುವುದು ಮನೆ ಕಟ್ಟಿಸುತ್ತಿರುವ ಮನೆ ಮಾಲೀಕರ ಅಭಿಪ್ರಾಯ.
ಅಗತ್ಯ ಸಾಮಗ್ರಿಗಳಲ್ಲಿ ಪಟ್ಟಿ ಸೇರಿರುವ ಎಂಸ್ಯಾಂಡ್ ಉತ್ಪಾದನೆಗೆ ಅಗತ್ಯ ಇರುವ ಕಲ್ಲು ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಕಲ್ಲುಗಣಿಕೆಯಲ್ಲಿನ ಸುರಕ್ಷತಾ ಕ್ರಮಗಳ ಪಾಲನೆ ಬಗ್ಗೆ ಪರಿಶೀಲನೆ ನಡೆಸಿ ಕಲ್ಲುಗಣಿಗಾರಿಗೆ ಅನುಮತಿ ನೀಡಬೇಕು. ಶಿವಮೊಗ್ಗ, ಚಿಕ್ಕಬಳ್ಳಾಪುರದ ಕಲ್ಲುಗಣಿಯಲ್ಲಿ ಸ್ಫೋಟ ನಡೆಯಲು ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು ಗಣಿಗಾರಿಕೆಗೆ ಅನುಮತಿ ನೀಡುವಾಗ ಸೂಕ್ತ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಸ್ಥಳ ಪರಿಶೀಲನೆ ನಡೆಸಬೇಕಿತ್ತು. ಅಲ್ಲದೆ, ತಿಂಗಳಿಗೆ ಒಮ್ಮೆಯಾದರೂ ಗಣಿಗಾರಿಕೆ ಸ್ಥಳಗಳಿಗೆ ಭೇಟಿ ನೀಡಬೇಕಿತ್ತು. ಸ್ಫೋಟ ಸಂಭವಿಸಲು ಅಧಿಕಾರಿಗಳ ನಿರ್ಲಕ್ಷ್ಯವೂ ಇದೆ. ಸರ್ಕಾರ ಕೂಡಲೇ ಸುರಕ್ಷತಾ ಕ್ರಮಗಳ ಮೂಲಕ ಕಲ್ಲುಗಣಿಗಾರಿಕೆ ಅನುಮತಿ ನೀಡಬೇಕು ಎಂದು ಕಟ್ಟಡ ನಿರ್ಮಾಣ ಗುತ್ತಿಗೆಯಲ್ಲಿ ತೊಡಗಿರುವ ಮನೋಹರ್ ಅವರ ಒತ್ತಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.