ದೊಡ್ಡಬೆಳವಂಗಲ (ದೊಡ್ಡಬಳ್ಳಾಪುರ):ತಾಲ್ಲೂಕಿನ ಹುಲುಕುಡಿ ಸುಕ್ಷೇತ್ರದಲ್ಲಿ ಕಾರ್ತಿಕ ಮಾಸದ ಮಂಗಳವಾರ ರಾತ್ರಿ ವಿಜೃಂಭಣೆಯ ಲಕ್ಷ ದೀಪೋತ್ಸವ, ಮುತ್ತಿನ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ಕ್ಷೇತ್ರದ ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸುತ್ತಲಿನ ಗ್ರಾಮಗಳಲ್ಲದೆ ಬೆಂಗಳೂರಿನಿಂದಲೂ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸ್ವಾಮಿಯ ಸನ್ನಿಧಿಯಲ್ಲಿ ದೀಪ ಹಚ್ಚಿದರು.
ದೇವಾಲಯದ ಆವರಣದಲ್ಲಿ ರಂಗೋಲಿ ಹಾಕಿ ಅದರ ಸುತ್ತಲೂ ದೀಪಗಳನ್ನು ಹಚ್ಚಲಾಗಿತ್ತು. ಭಕ್ತರು ಸ್ವಾಮಿಯ ಉಯ್ಯಾಲೋತ್ಸವದಲ್ಲೂ ಪಾಲ್ಗೊಂಡಿದ್ದರು. ಹುಲುಕುಡಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್‌ನಿಂದ ಸುಮಾರು ಐದು ಸಾವಿರ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಲಕ್ಷ ದೀಪೋತ್ಸವ ಆರಂಭಕ್ಕೂ ಮುನ್ನ ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮ ದೇವರ ಉತ್ಸವ ಮೂರ್ತಿಗಳನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ನಡೆಸಲಾಯಿತು.
ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಶಾಸಕ ಟಿ. ವೆಂಕಟರಮಣಯ್ಯ, ಬಿಜೆಪಿ ಮುಖಂಡ ಧೀರಜ್ ಮುನಿರಾಜು ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ದೇವರ ದರ್ಶನ ಪಡೆದರು.
ವೀರಭದ್ರಸ್ವಾಮಿ ಕ್ಷೇತ್ರಾಭಿವೃದ್ಧಿ ಟ್ರಸ್ಟಿಗಳಾದ ಬಿ.ಎಸ್. ಚನ್ನೇಗೌಡ, ನಂಜುಂಡಯ್ಯ, ಬಸವರಾಜ, ಮಾರೇಗೌಡ, ಮೃತ್ಯುಂಜಯಪ್ಪ ಇದ್ದರು. ಕ್ಷೇತ್ರದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ವಿಶೇಷ ಪೂಜೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.