ವಿಜಯಪುರ: ಚನ್ನರಾಯಪಟ್ಟಣ ಹೋಬಳಿ ಬೆಟ್ಟಕೋಟೆಯ ಬಳಿ ಸರ್ವೆ ನಂಬರ್ 1ರ ಪಕ್ಕದಲ್ಲಿನ 35ನೇ ಸರ್ವೇ ನಂಬರ್‌ನೊಂದಿಗೆ ರೈತರ ಭೂಮಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ದೂರು ನೀಡಿದ್ದರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕರೀಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಟ್ಟಕೋಟೆ ಗ್ರಾಮಕ್ಕೆ ಸೋಮವಾರ ಬೆಳಿಗ್ಗೆ ಬಂದಿದ್ದ ಅವರು, ಸರ್ವೇ ನಂಬರ್ 35ರಲ್ಲಿ ಅರಣ್ಯ ಇಲಾಖೆಗೆ ಸೇರಿದ ಭೂಮಿಯಾಗಿದ್ದು, ಸರ್ವೆ ನಂಬರ್ 1ರಲ್ಲಿ ರೈತರ ಭೂಮಿ ಇದೆ ಎಂದು ದೂರು ಸಲ್ಲಿಸಿದ್ದರು.
‘ಕೂಡಲೇ ಭೂ ಅಳತೆ ನಡೆಸಿ ರೈತರ ಭೂಮಿ ಒತ್ತುವರಿಯಾಗಿದ್ದರೆ ತೆರವುಗೊಳಿಸಿ ಅನುಕೂಲ ಮಾಡಿಕೊಡಿ, ಒತ್ತವರಿಯಾಗದಿದ್ದರೆ ಯಥಾಸ್ಥಿತಿ ಕಾಪಾಡಿ ವರದಿ ಸಲ್ಲಿಸಿ’ ಎಂದು ಸ್ಥಳದಲ್ಲಿದ್ದ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಹನುಮೇಗೌಡ ಅವರಿಗೆ ಸೂಚಿಸಿದರು.
ತಹಶೀಲ್ದಾರ್ ರಾಜಣ್ಣ, ಕಂದಾಯ ಅದಾಲತ್ ಉಪವಿಭಾಗಾಧಿಕಾರಿ ಮಮತಾದೇವಿ, ಪ್ರಭಾರ ಉಪತಹಶೀಲ್ದಾರ್ ಚಿದಾನಂದ್, ಗ್ರಾಮ ಲೆಕ್ಕಾಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.