ಸೂಲಿಬೆಲೆ: ‘ಸರ್ಕಾರದಿಂದ ಮಂಜೂರಾಗಿದ್ದ ಸ್ಮಶಾನ, ಗೋಮಾಳ ಮತ್ತು ಬೇಚಾರಕ್ ಗ್ರಾಮಗಳ ಭೂಮಿಯನ್ನು ಸಂಸದ ಬಿ.ಎನ್. ಬಚ್ಚೇಗೌಡ ಅವರ ಕುಟುಂಬ ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ. ನಾಗರಾಜ್ ಆರೋಪಿಸಿದರು.
ಸೂಲಿಬೆಲೆಯ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಹೋಬಳಿ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ಸಂಸದರ ಕುಟುಂಬದ ಭೂ ಕಬಳಿಕೆ ಬಗ್ಗೆ ಯಾವುದೇ ವೇದಿಕೆ ಅಥವಾ ಮಾಧ್ಯಮದ ಮುಂದೆ ಬಂದರೆ ದಾಖಲೆ ಸಹಿತ ಬಹಿರಂಗಪಡಿಸುತ್ತೇನೆ’ ಎಂದು ಸವಾಲು ಹಾಕಿದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೂಲಿಬೆಲೆ ಹೋಬಳಿ ವ್ಯಾಪ್ತಿಯ 5 ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಹೇಳಿದರು.
‘ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲು ದುಡಿಯಬೇಕು. ನಿಮ್ಮ ಗ್ರಾಮಗಳ ಅಭಿವೃದ್ಧಿ ಮಾಡುವ ಜವಾಬ್ದಾರಿ ನನ್ನದು’ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.
ಮುಖಂಡರಾದ ರಘುವೀರ್, ಮರವೆ ಕೃಷ್ಣಪ್ಪ, ಸುಗಟೂರು ರಮೇಶ, ಅರಸನಹಳ್ಳಿ ನಾರಾಯಣಸ್ವಾಮಿ, ಚಾಂದ್ ಪಾಷಾ, ಎಸ್.ಕೆ. ಅಂಜದ್ ಪಾಷಾ, ಎಸ್. ರವಿ, ರಾಜಕುಮಾರ್, ರಾಘವೇಂದ್ರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.