ಆನೇಕಲ್: ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಾಗಿ 68 ವರ್ಷ ಕಳೆದರೂ ಭೂ ದಾಖಲೆಗಳು ಹಸ್ತಾಂತರವಾಗದ ಕಾರಣ ಕಂದಾಯ ದಾಖಲೆಗಳಿಗೆ ಇಂದಿಗೂ ತಮಿಳುನಾಡಿನ ಕಂದಾಯ ಕಚೇರಿಗಳಿಗೆ ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯಿತಿ ಎಂಟು ಗ್ರಾಮಗಳ ರೈತರು ಅಲೆಯುತ್ತಿದ್ದಾರೆ.
ಮರಸೂರು ಗ್ರಾಮ ಪಂಚಾಯಿತಿ ಮರಸೂರು, ಮಡಿವಾಳ, ಮರಸೂರು ಅಗ್ರಹಾರ, ಬಂಡಾಪುರ, ಶೆಟ್ಟಿಹಳ್ಳಿ, ಆಡೇಸೊಣ್ಣಹಟ್ಟಿ, ಹಳೇವೂರು, ನಾಗನಾಯಕನಹಳ್ಳಿ ಹಲವು ರೈತ ಕುಟುಂಬಗಳು ಆಕಾರ್ ಬಂದ್, ನಕ್ಷೆ ಸೇರಿದಂತೆ ಕಂದಾಯ ದಾಖಲೆಗಳಿಗೆ ಪಡೆಯಲ ತಮಿಳುನಾಡಿನ ಚೆನ್ನೈಗೆ ಹೋಗಬೇಕಿದೆ.
ಮಾರಾಟ, ಜಮೀನು ಹಕ್ಕು ಮತ್ತಿತರ ಸಂದರ್ಭಗಳಲ್ಲಿ ದಾಖಲೆ ಕಾನೂನಾತ್ಮಕವಾಗುವುದಿಲ್ಲ. ಹೀಗಾಗಿ ಮೂಲ ದಾಖಲೆಗಳಿಗೆ ತಮಿಳುನಾಡಿಗೆ ಅಲೆಯಬೇಕಿದೆ.
1956 ರಾಜ್ಯ ಪುನರ್‌ವಿಂಗಡನೆಗೂ ಮುನ್ನ ಮರಸೂರು ಗ್ರಾಮ ಪಂಚಾಯಿತಿ ಎಂಟು ಗ್ರಾಮಗಳು ಮದ್ರಾಸ್ ಪ್ರಾಂತ್ಯದಲ್ಲಿದ್ದವು. ಭಾಷಾವಾರು ರಾಜ್ಯ ಪುನರ್‌ವಿಂಗಡನೆ ನಂತರ ಮೈಸೂರು ರಾಜ್ಯಕ್ಕೆ ಸೇರ್ಪಡೆಯಾದವು. ಆದರೆ, ಹಿಂದಿನ ಮೂಲ ದಾಖಲೆಗಳು ತಮಿಳುನಾಡಿನಲ್ಲಿಯೇ ಉಳಿದವು. ಪುನರ್‌ವಿಂಗಡನೆಯಾದ ನಂತರ ವ್ಯವಹರಿಸಿರುವ ದಾಖಲೆಗಳು ಮಾತ್ರ ಕರ್ನಾಟಕದಲ್ಲಿ ದೊರೆಯುತ್ತವೆ. ಹಿಂದಿನ ದಾಖಲೆಗಳು ತಮಿಳುನಾಡಿನಲ್ಲಿ ಉಳಿದಿವೆ. ಈ ಗ್ರಾಮಗಳ ಶೇ90ರಷ್ಟು ಭೂದಾಖಲೆಗಳು ತಮಿಳುನಾಡಿನಲ್ಲಿಯೇ ಉಳಿದಿವೆ.
ಜಮೀನಿನ ಆಕಾರಬಂದ್, ಕಂದಾಯ ನಕ್ಷೆ ಸೇರಿದಂತೆ ಹಲವು ದಾಖಲೆಗಳಿಗಾಗಿ ತಮಿಳುನಾಡಿಗೆ ಹೋಗಬೇಕಾಗಿದೆ. ಕಂದಾಯ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದರೆ ಹಿಂಬರಹ ನೀಡುತ್ತಾರೆ. ಲ್ಯಾಂಡ್ ಡೆವಲಪರ್‌ಗಳು, ಶ್ರೀಮಂತರು ಚೆನ್ನೈ ಹೋಗಿ ದಾಖಲೆ ತಂದು ತಮ್ಮ ಕಂದಾಯ ದಾಖಲೆಗಳನ್ನು ಪೂರ್ಣಗೊಳಿಸಿಕೊಳ್ಳುತ್ತಾರೆ. ಆದರೆ, ಸಣ್ಣ, ಮಧ್ಯಮ ಹಿಡುವಳಿದಾರರು ತಮ್ಮ ದಾಖಲೆಗಳಿಗಾಗಿ ತಮಿಳುನಾಡಿನವರೆಗೂ ಹೋಗಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.
ಮರಸೂರು ಗ್ರಾಮ ಪಂಚಾಯಿತಿ ಆಕಾರಬಂದ್ ಲಭ್ಯವಿಲ್ಲ. ಇದರಿಂದ ಈ ಗ್ರಾಮಗಳ ಆಕಾರಬಂದ್ ಪುಸ್ತಕ ಪುನರ್ ನಿರ್ಮಾಣ ಮಾಡಲು ಕ್ರಿಯಾ ಯೋಜನೆ ರೂಪಿಸುವಂತೆ ಭೂದಾಖಲೆಗಳ ಜಂಟಿ ನಿರ್ದೇಶಕರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ದಾಖಲೆಗಳ ಪುನರ್ ನಿರ್ಮಾಣಕ್ಕಾಗಿ ಭೂಮಾಪಕರನ್ನು ನೇಮಕ ಮಾಡಲಾಗಿತ್ತು. ಆದರೆ, ಇದು ಆದೇಶದಲ್ಲಿಯೇ ಉಳಿಯಿತು. ಜಾರಿಗೆ ಮಾತ್ರ ಬಂದಿಲ್ಲ ಎಂದು ಸ್ಥಳೀಯರು ದೂರುತ್ತಾರೆ.
ದಾಖಲೆಗಳಿಗಾಗಿ ಸಾಮಾನ್ಯ ಜನರು ಪರದಾಡುವುದಕ್ಕಿಂತ ತಮಿಳುನಾಡನಿಂದ ಕಂದಾಯ ದಾಖಲೆಗಳನ್ನು ತಂದು ರಾಜ್ಯದಲ್ಲಿ ಲಭ್ಯವಿರುವ ದಾಖಲೆಗಳನ್ನು ಜೋಡಿಸಿ ಪಕ್ಕಾ ದಾಖಲೆ ಸೃಷ್ಟಿಸಿದರೆ ಎಂಟು ಗ್ರಾಮಗಳ ಜನರಿಗೆ ನೆಮ್ಮದಿ ಸಿಗುತ್ತದೆ ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಮರಸೂರು ಗ್ರಾಮದ ಬಂಡಿ ಮಹಾಕಾಳಿ ದೇವಾಲಯಕ್ಕೆ ಸುಮಾರು 36 ಎಕರೆ ಜಮೀನಿದೆ. ನ್ಯಾಯಾಲಯದಲ್ಲಿ ದೇವಾಲಯಕ್ಕೆ ಸೇರಿದ ಜಮೀನುಗಳ ಕಂದಾಯ ದಾಖಲೆ ಚೆನ್ನೈನಿಂದ ಪಡೆದು ಜಮೀನು ಉಳಿಸಿಕೊಳ್ಳುವಲ್ಲಿ ದೇವಾಲಯ ಸಮಿತಿ ಯಶಸ್ವಿಯಾಗಿದ್ದಾರೆ. ಇದೇ ರೀತಿ ಎಲ್ಲ ಎಂಟು ಗ್ರಾಮಗಳ ದಾಖಲೆ ಪಕ್ಕಾ ಮಾಡಲು ಸರ್ಕಾರ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಳೀಯರ ಒತ್ತಾಸೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.