ದೊಡ್ಡಬಳ್ಳಾಪುರ: ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸ ಇಲ್ಲದೆ ಬರಿಗೈಯಲ್ಲಿ ಕುಳಿತವರು, ಕೆಲಸ ಕಳೆದುಕೊಂಡವರದ್ದೇ ದೊಡ್ಡ ಸುದ್ದಿ. ಆದರೆ, ಲಾಕ್‌ಡೌನ್ ಸಮಯದಲ್ಲಿ ರಾತ್ರಿ ಹಗಲು ಎನ್ನದೆ ದುಡಿದವರು ಹಮಾಲಿಗಳು.
ಹೌದು;ಲಾಕ್‌ಡೌನ್ ಜಾರಿಯಾದ ಒಂದು ವಾರದ ನಂತರ ಕೂಲಿ ಕಾರ್ಮಿಕರು, ವಲಸಿಗರು ಹಾಗೂ ಬಡತನ ರೇಖೆಗಿಂತಲೂ ಕೆಳಗಿನವರು ಹಸಿವಿನಿಂದ ಉಳಿಯಬಾರದೆಂದು ಎಂದು ನ್ಯಾಯಬೆಲೆ ಅಂಗಡಿಗಳ ಮೂಲಕ ಅಕ್ಕಿ, ಬೆಳೆ,ಗೋಧಿ ವಿತರಣೆಗೆ ಸರ್ಕಾರ ಮುಂದಾಯಿತು. ಮೊದಲ ಹಂತದಲ್ಲಿ ಒಂದು ತಿಂಗಳ ಆಹಾರ ಧಾನ್ಯ ಮಾತ್ರ ಹಂಚಿಕೆ ಮಾಡಲಾಗಿತ್ತು. ಆದರೆ, ಲಾಕ್‌ಡೌನ್ ವಿಸ್ತರಣೆಯಾಗುತ್ತಿದ್ದಂತೆ ಎರಡು ತಿಂಗಳ ಆಹಾರ ಧಾನ್ಯ ಒಮ್ಮೆಗೆ ವಿತರಣೆ ಮಾಡಲು ಮುಂದಾಯಿತು. ಇದಷ್ಟೇ ಅಲ್ಲದೆ, ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ಪಡೆಯಲು ಪಡಿತರ ಚೀಟಿ ಇಲ್ಲದ ಹೊರ ರಾಜ್ಯದವರು, ಸ್ಥಳೀಯರು ಸೇರಿದಂತೆ ಎಲ್ಲರಿಗೂ ಉಚಿತವಾಗಿ ಐದು ಕೆ.ಜಿ.ಅಕ್ಕಿ ವಿತರಣೆ ಮಾಡಲಾಯಿತು.
ಬೆಂಗಳೂರಿನಿಂದ ಲಾರಿಗಳ ಮೂಲಕ ಬರುವ ಅಕ್ಕಿ ಚೀಲಗಳನ್ನು ಗೋದಾಮಿನಲ್ಲಿ ಲಾಟು ಕಟ್ಟಿ ಮತ್ತೆ ಇಲ್ಲಿಂದ ಲಾರಿಗಳ ಮೂಲಕ ಸಾಗಿಸುವ ಕೆಲಸವನ್ನು ಹಮಾಲಿಗಳು ರಾತ್ರಿ ಹಗಲೆನ್ನದೆ ಕೆಲಸ ಮಾಡಿದ್ದಾರೆ. ಇವರೂ ಕೂಡ ಕೊರೊನಾ ವಾರಿಯಾರ್ಸ್‌ಗಳೇ. ಆದರೆ, ಇವರ ಕೆಲಸ ಮಾತ್ರ ಯಾರ ಗಮನಕ್ಕೂ ಬರಲೇ ಇಲ್ಲ. ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡಿದ ಎಲ್ಲರನ್ನು ಸಂಘ – ಸಂಸ್ಥೆಗಳ ವತಿಯಿಂದ ಅಭಿನಂದಿಸಲಾಯಿತು. ಮೂಟೆ ಹೊತ್ತ ಹಮಾಲಿಗಳನ್ನು ಇನ್ನಾದರೂ ಗುರುತಿಸಬೇಕಿದೆ.
ತಾಲ್ಲೂಕಿನ ನ್ಯಾಯಬೆಲೆ ಅಂಗಡಿಗಳಿಗೆ ಅಕ್ಕಿ ವಿತರಣೆ ಮಾಡಲು ಬೆಂಗಳೂರಿನಿಂದ ಲಾರಿಗಳ ಮೂಲಕ ನಗರದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಗೋದಾಮಿಗೆ ಬರುತ್ತದೆ. ಇಲ್ಲಿಂದ ತಾಲ್ಲೂಕಿನ ಯಾವ ನ್ಯಾಯಬೆಲೆ ಅಂಗಡಿಗಳಲ್ಲಿ ಎಷ್ಟು ಜನ ಪಡಿತರ ಚೀಟಿದಾರರು ಇದ್ದಾರೆ ಎನ್ನುವ ಲೆಕ್ಕದ ಮೇಲೆ ಆಹಾರ ಧಾನ್ಯದ ಚೀಲಗಳನ್ನು ಸ್ಥಳೀಯ ಲಾರಿಗಳ ಮೂಲಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಕಳುಹಿಸುತ್ತಾರೆ.
‘ಅಕ್ಕಿ ಮೂಟೆಗಳನ್ನು ಬೆನ್ನ ಮೇಲೆ ಹೊರಬೇಕಿದ್ದರೆ ದೈಹಿಕಶಕ್ತಿ ಅತಿ ಮುಖ್ಯ. ಹೀಗಾಗಿಯೇ ಈ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಈ ಕೆಲಸಕ್ಕೆ ಬಂದು 14 ವರ್ಷಗಳಾಗಿದೆ. ಬೇಸರ ಇಲ್ಲದೆ ಕೆಲಸ ಮಾಡುತ್ತಾ ಬಂದಿದ್ದೇನೆ’ ಎನ್ನುತ್ತಾರೆ ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಹಮಾಲಿಯಾಗಿ ಕೆಲಸ ಮಾಡುತ್ತಿರುವ ವಿಶ್ವನಾಥ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.