ವಿಜಯಪುರ: ಈಗ ಮದುವೆ ಋತು. ಜೊತೆಗೆ ಈದ್ ಉಲ್‌ಫಿತ್ ಹಬ್ಬ. ಬಸವ ಜಯಂತಿ, ಅಕ್ಷಯ ತೃತೀಯದ ಸಂಭ್ರಮದ ಕಾಲ. ಈಗ ಬಟ್ಟೆ ವಹಿವಾಟು ಜೋರಾಗಿರುತ್ತದೆ. ಉಡುಗೊರೆ ಮೂಲಕ ವರ್ಷದ ಗಳಿಕೆಯನ್ನು ವ್ಯಾಪಾರಸ್ಥರು ತೆಗೆಯುತ್ತಾರೆ. ಆದರೆ, ಈಗ ಲಾಕ್‌ಡೌನ್ ವಹಿವಾಟನ್ನು ನುಂಗಿ ಹಾಕಿದೆ.
ಬಟ್ಟೆ, ಬಂಗಾರ, ಪಾತ್ರೆಗಳ ಅಂಗಡಿ ಸಂಪೂರ್ಣ ಬಂದ್ ಆಗಿವೆ. ಇದರಿಂದ ವ್ಯಾಪಾರಿಗಳಿಗೆ ಮಾತ್ರವಲ್ಲ ಗ್ರಾಹಕರಿಗೂ ತೊಂದರೆಯಾಗುತ್ತಿದೆ. ನಿಯಮಗಳಿಂದಾಗಿ ಮದುವೆಯಾಗುವವರಿಗೂ ಬಟ್ಟೆ ದೊರಕದೇ ಪರದಾಡುತ್ತಿದ್ದಾರೆ.
ವಿಜಯಪುರದಲ್ಲಿ ಸಣ್ಣ ಬಟ್ಟೆ ಅಂಗಡಿಗಳು ಸೇರಿ 100ಕ್ಕೂ ಅಧಿಕ ಮಳಿಗೆಗಳು ವಿವಿಧ ಭಾಗದಲ್ಲಿ ಹೆಸರುವಾಸಿಯಾಗಿವೆ. ಕೆಲವು ಅಂಗಡಿಗಳನ್ನು ಬಿಟ್ಟರೆ ಉಳಿದವುಗಳೆಲ್ಲ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತವೆ. ಎಲ್ಲ ಕಟ್ಟಡಗಳಿಗೆ ದುಬಾರಿ ಬಾಡಿಗೆ ಹಾಗೂ ಮುಂಗಡ ನೀಡಲಾಗಿದೆ. ಒಂದು ವರ್ಷದಿಂದ ಕೊರೊನಾ ಸಂಕಷ್ಟದಿಂದಾಗಿ ಸರಿಯಾಗಿ ವ್ಯಾಪಾರ ವಹಿವಾಟುಗಳಿಲ್ಲದ ಕಾರಣ ಸರಿಯಾಗಿ ಬಾಡಿಗೆಗಳನ್ನು ಕಟ್ಟಲೂ ಸಾಧ್ಯವಾಗದೆ, ಕುಟುಂಬಗಳ ನಿರ್ವಹಣೆಯೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಬಟ್ಟೆ ಅಂಗಡಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಮುಂಗಡ ಹಣ ನೀಡಲಾಗಿದೆ. ಅವರಿಗೆ ಪ್ರತಿ ತಿಂಗಳು ಸಂಬಳ ಕೊಡಬೇಕು. ವಿದ್ಯುತ್ ಬಿಲ್ ಕಟ್ಟಬೇಕು. ವಿದ್ಯುತ್ ಬಿಲ್ ಕೂಡ ತುಂಬುವುದು ಕಷ್ಟವಾಗುತ್ತಿದೆ. ನಮ್ಮ ಅಂಗಡಿಗಳಿಗೆ ಖಾಯಂ ಗ್ರಾಹಕರು ಇದ್ದಾರೆ. ಅವರಿಗೆಲ್ಲ ತೊಂದರೆಯಾಗುತ್ತಿದೆ. ಉಳಿದ ಅಂಗಡಿಗಳಂತೆ ನಮಗೂ ದಿನದಲ್ಲಿ ನಾಲ್ಕು ತಾಸು ಕಾಲಾವಕಾಶ ನೀಡಬೇಕು ಎಂದು ಬಟ್ಟೆ ಅಂಗಡಿಗಳ ಮಾಲೀಕರ ಒತ್ತಾಯ.
₹2 ಲಕ್ಷ ಮುಂಗಡ ಕೊಟ್ಟು ₹6 ಲಕ್ಷ ಬಂಡವಾಳ ಹೂಡಿಕೆ ಮಾಡಿ ಹೊಸದಾಗಿ ಸಾಲ ಮಾಡಿ ಬಟ್ಟೆ ಅಂಗಡಿ ತೆರೆದಿದ್ದೆ. ಅಂಗಡಿ ತೆರೆದ ಒಂದೇ ವಾರದಲ್ಲಿ ಜನತಾ ಕರ್ಫ್ಯೂ ಜಾರಿಗೊಳಿಸಿದರು. ₹15 ಸಾವಿರ ಬಾಡಿಗೆ ಕಟ್ಟಬೇಕು. ಕುಟುಂಬದ ನಿರ್ವಹಣೆಯೂ ಕಷ್ಟವಾಗಿದೆ. ಸಣ್ಣ ವ್ಯಾಪಾರಿಗಳನ್ನು ಗಮನದಲ್ಲಿಟ್ಟು ಕನಿಷ್ಠ 10 ಗಂಟೆಯವರೆಗಾದರೂ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ವ್ಯಾಪಾರಿ ಮಂಜುನಾಥ್ ಮನವಿ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್ ಮಾತನಾಡಿ, ಸರ್ಕಾರದ ನಿರ್ದೇಶನ ಪಾಲನೆ ಮಾಡುವುದು ನಮ್ಮ ಕರ್ತವ್ಯ. ಆದರೆ, ಕೋವಿಡ್ ಬಗ್ಗೆ ಜಾಗ್ರತೆ ಅಗತ್ಯ. ಕೇವಲ ಸರ್ಕಾರದಿಂದ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರದಿಂದ ನಿರ್ದೇಶನ ಬಂದರೆ ಅವಕಾಶ ನೀಡಲಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.