ADVERTISEMENT

ಮೈತ್ರಿ ರಾಜಕೀಯದಿಂದ ಪ್ರಜಾಪ್ರಭುತ್ವ ಅಪವಿತ್ರ: ಪಿ. ವೆಂಕಟೇಶ್‌

ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ನಂದಿಗುಂದ ಪಿ. ವೆಂಕಟೇಶ್‌

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 5:18 IST
Last Updated 8 ಏಪ್ರಿಲ್ 2024, 5:18 IST
ದೇವನಹಳ್ಳಿದ ಬಿ.ಎಸ್‌.ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು
ದೇವನಹಳ್ಳಿದ ಬಿ.ಎಸ್‌.ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು   

ದೇವನಹಳ್ಳಿ: ರಾಜಕೀಯದಲ್ಲಿ ತತ್ವ ಸಿದ್ಧಾಂತದ ಮೇಲೆ ಚುನಾವಣೆ ಎದುರಿಸಬೇಕು. ಅಧಿಕಾರದ ದಾಹದಿಂದ ಪ್ರಜಾಪ್ರಭುತ್ವವನ್ನೇ ಅಪವಿತ್ರ ಮಾಡುವ ಮೈತ್ರಿ ರಾಜಕೀಯವನ್ನು ಬಹುಜನ ಸಮಾಜ ಪಾರ್ಟಿ ಮಾಡುವುದಿಲ್ಲ ಎಂದು ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ನಂದಿಗುಂದ ಪಿ. ವೆಂಕಟೇಶ್‌ ತಿಳಿಸಿದರು.

ಪಟ್ಟಣದ ಪಕ್ಷದ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಭೆ ಬಳಿಕ ಮಾತನಾಡಿ, ‘ರಾಜ್ಯ 28 ಲೋಕಸಭಾ ಕ್ಷೇತ್ರದಲ್ಲಿಯೂ ಏಕಾಂಗಿಯಾಗಿ ಸ್ಪರ್ಧಿಸುವ ಮೂಲಕ ಸಂವಿಧಾನದ ಆಶಯ, ದಮನೀತರ ರಕ್ಷಣೆಗೆ ಪಣ ತೊಟ್ಟಿದ್ದೇವೆ’ ಎಂದು ತಿಳಿಸಿದರು.

ವಿವಿಧ ಸಿದ್ಧಾಂತ ಹೊಂದಿರುವ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿ ಅಧಿಕಾರಕ್ಕೆ ಬಂದರೆ, ಪ್ರಜೆಗಳ ಅಭಿವೃದ್ಧಿಗಿಂತ ಆಡಳಿತಕ್ಕಾಗಿ ರಾಜಕೀಯ ಮುಖಂಡರ ಕಿತ್ತಾಟವೇ ಹೆಚ್ಚಾಗುತ್ತದೆ ಎಂದರು.

ADVERTISEMENT

60 ವರ್ಷಗಳಿಂದ ದೇಶವನ್ನು ಆಳಿದ ಕಾಂಗ್ರೆಸ್‌ ‘ಇಂಡಿಯಾ’ ಒಕ್ಕೂಟ ಮಾಡಿಕೊಂಡಿದೆ. ಕಳೆದ 10 ವರ್ಷದಿಂದ ದೇಶವನ್ನು ವಿಶ್ವ ಗುರು ಮಾಡುತ್ತಿದ್ದೇವೆ ಎಂದು ಹಸಿ ಸುಳ್ಳು ಹೇಳಿಕೊಂಡು ಬಿಜೆಪಿಯೂ ಎನ್‌ಡಿಎ ರಚಿಸಿಕೊಂಡು ಚುನಾವಣೆ ಎದುರಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಟೀಕಿಸಿದರು.

ದೇಶದಲ್ಲಿ ಹೆಚ್ಚಿನ ಭಾಗ ಬಹುಜನರೇ ಮತದಾರರಿದ್ದು, ಅವರ ಕೈಗೆ ಅಧಿಕಾರ ಸಿಕ್ಕರೇ ಮಾತ್ರ ಎಲ್ಲರ ಅಭಿವೃದ್ಧಿ ಸಾಧ್ಯ. ನಮ್ಮ ಪಕ್ಷದ ಯಾವುದೇ ಪ್ರಣಾಳಿಕೆ ಇಲ್ಲ. ಸಂವಿಧಾನವೇ ನಮ್ಮ ಪ್ರಣಾಳಿಕೆಯಾಗಿದೆ. ಸಂವಿಧಾನ ಬದಲಾಯಿಸಲು ಬಿಜೆಪಿ ಮುಂದಾಗಿದೆ. ಸಂವಿಧಾನ ತಿದ್ದಲು ಕಾಂಗ್ರೆಸ್‌ ಷ್ಯಡಂತ್ರ ರೂಪಿಸಿದ್ದು, ಬಿಎಸ್‌ಪಿ ಮಾತ್ರ ಸಂವಿಧಾನ ಉಳಿವಿಗೆ ಹೋರಾಟ ಮಾಡುತ್ತಿದೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಪಿ.ಮಹದೇವ್‌ ಮಾತನಾಡಿ, ಎರಡು ರಾಷ್ಟ್ರೀಯ ಪಕ್ಷಗಳು ದೇಶದಲ್ಲಿ ಬಡತನ ನಿರ್ಮೂಲನೆ ಮಾಡಿಲ್ಲ. ಯುವಕರಿಗೆ ಉದ್ಯೋಗ ಇಲ್ಲ, ಮೂಲಭೂತ ಸೌಕರ್ಯವಿಲ್ಲ. ಕೊರೊನಾದಲ್ಲಿ ಭ್ರಷ್ಟಚಾರ ಮಾಡಿ ವ್ಯಕ್ತಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಕ್ಷೇತ್ರಕ್ಕೆ ಪರಿಚಯವಿಲ್ಲದ ಅಭ್ಯರ್ಥಿಗೆ ಕಾಂಗ್ರೆಸ್‌ ಮಣೆ ಹಾಕಿದ್ದು, ನಿಮ್ಮ ಸಮಸ್ಯೆ ಬಗೆಹರಿಸಲು ಸ್ಥಳೀಯರಿಗೆ ಮತದಾರರ ಬೆಂಬಲಿಸಿ ಎಂದರು.

ಬಿ.ಎಸ್‌.ಪಿ ಜಿಲ್ಲಾ ಕಾರ್ಯದರ್ಶಿ ಆರ್.ನಾಗೇಶ್‌, ಉಪಾಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಚಿಕ್ಕರಂಗಣ್ಣ, ನರಸಿಂಹಯ್ಯ, ಖಜಾಂಚಿ ಹೇಮ, ನೆಲಮಂಗಾ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ದೇವನಹಳ್ಳಿ ಅಧ್ಯಕ್ಷ ನಾಗರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.