ADVERTISEMENT

ಆನೇಕಲ್ | ಕಡಿಮೆ ವೆಚ್ಚದ ಸ್ವದೇಶಿ ತಂತ್ರಜ್ಞಾನದ ವೆಂಟಿಲೇಟರ್

ಜಿಗಣಿ ಎಸಿಇ ಸುಹಾಸ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಸ್ಥ ಡಾ.ಜಗದೀಶ್‌ ಹಿರೇಮಠ ಮಾರ್ಗದರ್ಶನ

ಆನೇಕಲ್ ಶಿವಣ್ಣ
Published 23 ಮೇ 2020, 20:00 IST
Last Updated 23 ಮೇ 2020, 20:00 IST
ಕಡಿಮೆ ವೆಚ್ಚದ ಮತ್ತು ಗುಣಮಟ್ಟದ ಸ್ವದೇಶಿ ತಂತ್ರಜ್ಞಾನದ ವೆಂಟಿಲೇಟರ್ ವಿನ್ಯಾಸವನ್ನು ರೂಪಿಸುವಲ್ಲಿ ಶ್ರಮಿಸಿದ ಡಾ.ಜಗದೀಶ್ ಹಿರೇಮಠ ಅವರ ತಂಡ
ಕಡಿಮೆ ವೆಚ್ಚದ ಮತ್ತು ಗುಣಮಟ್ಟದ ಸ್ವದೇಶಿ ತಂತ್ರಜ್ಞಾನದ ವೆಂಟಿಲೇಟರ್ ವಿನ್ಯಾಸವನ್ನು ರೂಪಿಸುವಲ್ಲಿ ಶ್ರಮಿಸಿದ ಡಾ.ಜಗದೀಶ್ ಹಿರೇಮಠ ಅವರ ತಂಡ   

ಆನೇಕಲ್: ಕೊರೊನಾ ಸಂದರ್ಭದಲ್ಲಿ ಜೀವ ರಕ್ಷಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವ ವೆಂಟಿಲೇಟರ್‌ಗಳಿಗೆ ಸಾಕಷ್ಟು ಬೇಡಿಕೆ ಇದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸ್ವದೇಶಿ ಸಾಮಗ್ರಿಗಳನ್ನು ಬಳಸಿ ಡಿಆರ್‌ಡಿಒ ಮತ್ತು ಮಹೇಂದ್ರ ಅಂಡ್‌ ಮಹೇಂದ್ರ ಕಂಪನಿ ವೆಂಟೀಲೇಟರ್‌ ತಯಾರಿಕೆ ಮಾಡುತ್ತಿದೆ. ಜಿಗಣಿ ಎಸಿಇ ಸುಹಾಸ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಸ್ಥ ಡಾ.ಜಗದೀಶ್‌ ಹಿರೇಮಠಇದಕ್ಕೆ ಮುಖ್ಯ ಸಲಹೆಗಾರರು. ಉತ್ಪಾದನೆಗೆ ನೆರವು ನೀಡುತ್ತಿರುವ ಕೊಂಡಿಯೂ ಹೌದು.

ಸಾಮಾನ್ಯ ವೆಂಟಿಲೇಟರ್‌ಗೆ ₹10-15ಲಕ್ಷ ವೆಚ್ಚವಾಗುತ್ತದೆ. ಆದರೆ, ಕಡಿಮೆ ಬೆಲೆಯಲ್ಲಿ ಗುಣಮಟ್ಟದ ವೆಂಟಿಲೇಟರ್‌ಗಳನ್ನು ತಯಾರಿಸಿ ನೀಡುವುದು ಒಂದು ಸವಾಲಾಗಿತ್ತು. ಈ ನಿಟ್ಟಿನಲ್ಲಿ ಕಡಿಮೆ ವೆಚ್ಚದಲ್ಲಿ ಸ್ವದೇಶಿ ತಂತ್ರಜ್ಞಾನ ಮತ್ತು ಬಿಡಿ ಭಾಗಗಳನ್ನು ಬಳಸಿಕೊಂಡು ಉತ್ತಮ ಗುಣಮಟ್ಟದ ವೆಂಟಿಲೇಟರ್‌ಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ಡಿಆರ್‌ಡಿಒ ನಡೆಸಿದ ಪ್ರಯತ್ನದ ಯಶೋಗಾಥೆ ಇಲ್ಲಿದೆ.

ಕೊರೊನಾ ಹರಡುವಿಕೆಯಿಂದ ವೆಂಟಿಲೇಟರ್‌ಗಳದ್ದೇ ದೊಡ್ಡ ಸಮಸ್ಯೆಯಾಗಿತ್ತು. ಈ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಇಲಾಖೆಯ ಡಿಆರ್‌ಡಿಒ ಸಂಸ್ಥೆಯು ಮೈಸೂರು ಮೂಲದ ಸ್ಕ್ಯಾನರೇ ಕಂಪನಿಯನ್ನು ಸಂಪರ್ಕಿಸಿತು. ಸ್ಕ್ಯಾನರೇ ಕಂಪನಿಯಲ್ಲಿ ವೆಂಟಿಲೇಟರ್‌ ಉತ್ಪಾದನಾ ತಂತ್ರಜ್ಞಾನವಿತ್ತು. ಸ್ಕ್ಯಾನರೇ ಸಂಸ್ಥೆಗೆ ಸಲಹೆಗಾರರಾಗಿದ್ದ ಡಾ.ಜಗದೀಶ್‌ ಹಿರೇಮಠ ಅವರ ತಂಡ ಡಿಆರ್‌ಡಿಒಗೆ ಪ್ರತ್ಯೇಕ ವಿನ್ಯಾಸ ಸಿದ್ಧಪಡಿಸಿ ನೀಡಿತು.

ADVERTISEMENT

ಬಿಇಎಲ್‌ ಮತ್ತು ಡಿಆರ್‌ಡಿಒ ಸ್ಕ್ಯಾನರೇ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ವೆಂಟಿಲೇಟರ್‌ಗಳ ತಯಾರಿಕೆಗೆ ಮುನ್ನುಡಿ ಬರೆಯಲಾಯಿತು. ಜುಲೈ ತಿಂಗಳ ವೇಳೆಗೆ 30 ಸಾವಿರ ಇವಿ-200 ವೆಂಟಿಲೇಟರ್‌ಗಳನ್ನು ಸಿದ್ಧಪಡಿಸುವ ಗುರಿ ಇದೆ. ಸ್ಕ್ಯಾನರೇ ಸಂಸ್ಥೆಯ ತಂತ್ರಜ್ಞಾನ, ಡಿಆರ್‌ಡಿಒ ಮತ್ತು ಬಿಇಎಲ್‌ ಪರಿಶ್ರಮದಿಂದ ಇದು ಸಾಧ್ಯವಾಗಿದೆ ಎನ್ನುತ್ತಾರೆ ಎಂದು ಡಾ.ಜಗದೀಶ್ ಹಿರೇಮಠ.

ವೆಂಟಿಲೇಟರ್‌ ತಯಾರಿಕೆಯಲ್ಲಿ ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ವೆಂಟಿಲೇಟರ್‌ ತಯಾರಿಕೆಗೆ ಕಚ್ಚಾ ವಸ್ತುಗಳ ಪೂರೈಕೆ ಸರಪಳಿ ಕಡಿತವಾಗಿತ್ತು. ವಿದೇಶಗಳಿಂದ ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳಬೇಕಾಗಿತ್ತು. ಆದರೆ, ಕಠಿಣ ಸಂದರ್ಭದಲ್ಲಿ ಸ್ವದೇಶಿ ತಂತ್ರಜ್ಞಾನ ಬಳಸಿಕೊಂಡು ಗುಣಮಟ್ಟದ ವೆಂಟಿಲೇಟರ್‌ಗಳನ್ನು ಉತ್ಪಾದಿಸುತ್ತಿರುವ ಹೆಗ್ಗಳಿಕೆ ನಮ್ಮದಾಗಿದೆ ಎನ್ನುತ್ತಾರೆ ಅವರು.

ತೆರೆದ ಅವಕಾಶದ ಬಾಗಿಲು
ವೆಂಟಿಲೇಟರ್‌ಗಳನ್ನು ಜಿಗಣಿ ಎಸಿಇ ಸುಹಾಸ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕ್ಲಿನಿಕಲ್‌ನಲ್ಲಿ ಪರೀಕ್ಷೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ನಿಮ್ಹಾನ್ಸ್‌ನಲ್ಲಿ ಸಹ ಕ್ಲಿನಿಕಲ್‌ ಟ್ರಯಲ್‌ ನಡೆಸಲು ಸಿದ್ಧತೆ ನಡೆದಿದೆ. ಸವಾಲಿನ ಸಂದರ್ಭದಲ್ಲಿ ತಂಡ ಒಗ್ಗೂಡಿ ದೇಶಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಿದ ತೃಪ್ತಿ ಇದೆ ಎಂದು ಜಗದೀಶ ಹಿರೇಮಠ ಅಭಿಪ್ರಾಯಪಟ್ಟರು.

ಡಿಆರ್‌ಡಿಒ ಮತ್ತು ಮಹೇಂದ್ರ ಅಂಡ್‌ ಮಹೇಂದ್ರ ಕಂಪನಿಗೆ ವೆಂಟಿಲೇಟರ್‌ ತಂತ್ರಜ್ಞಾನ ನೀಡುವಲ್ಲಿ ಸಹಕರಿಸಿದ ಸ್ಕ್ಯಾನರೇ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವಿಶ್ವಪ್ರಸಾದ್‌ ಆಳ್ವ ಅವರು ಉದಾರತೆ ತೋರಿದ್ದಾರೆ. ಇದೊಂದು ದೇಶ ಸೇವೆ ಎಂದು ಭಾವಿಸಿ ಕೆಲಸ ಮಾಡಲಾಗಿದೆ. ಮಹೇಂದ್ರ ಅಂಡ್‌ ಮಹೇಂದ್ರ ಕಂಪನಿ ಉತ್ಪಾದಿಸುತ್ತಿರುವ ವೆಂಟಿಲೇಟರ್‌ಗಳು ಅಂದಾಜು ₹1ಲಕ್ಷಕ್ಕೆ ಲಭ್ಯವಾಗುವ ಸಾಧ್ಯತೆಯಿದೆ. ಇದರಿಂದಾಗಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸ್ವದೇಶಿ ತಂತ್ರಜ್ಞಾನದ ವೆಂಟಿಲೇಟರ್‌ಗಳ ಉತ್ಪಾದನೆಗೆ ಅವಕಾಶದ ಬಾಗಿಲು ತೆರೆದಿದೆ ಎಂದು ಮಾಹಿತಿ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.