ADVERTISEMENT

ಚಂದ್ರಗ್ರಹಣ: ದೊಡ್ಡಬಳ್ಳಾಪುರದಲ್ಲಿ ದೇಗುಲಗಳ ಬಾಗಿಲು ಬಂದ್‌

ಸಂಜೆ ದೇವರ ದರ್ಶನ ಪಡೆದ ಭಕ್ತರು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 7:25 IST
Last Updated 9 ನವೆಂಬರ್ 2022, 7:25 IST
ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಬಾಗಿಲನ್ನು ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮುಚ್ಚಲಾಗಿತ್ತು
ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಬಾಗಿಲನ್ನು ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮುಚ್ಚಲಾಗಿತ್ತು   

ದೊಡ್ಡಬಳ್ಳಾಪುರ: ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ದೇವಾಲಯ, ಶನಿ ಮಹಾತ್ಮ ದೇವಾಲಯದಲ್ಲಿ ಮಂಗಳವಾರ ರಾಹುಗ್ರಸ್ತ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಬೆಳಿಗ್ಗೆ 10.30ಕ್ಕೆ ದೇವಸ್ಥಾನದ ಬಾಗಿಲು ಮುಚ್ಚಲಾಯಿತು.

ಚಂದ್ರಗ್ರಹಣದ ಅಂಗವಾಗಿ ಬೆಳಿಗ್ಗೆ 6ರಿಂದಲೇ ದೇವರಿಗೆ ಹಾಲಿನ ಅಭಿಷೇಕ, ಗಂಧದ ಅಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನಡೆಯಿತು. 7.30ಕ್ಕೆ ಮಹಾ ಮಂಗಳಾರತಿ ನೆರವೇರಿಸಿ ದೇವರ ದರ್ಶನಕ್ಕೆ ಭಕ್ತರಿಗೆ‌ ಅನುಕೂಲ ಮಾಡಿಕೊಡಲಾಯಿತು. ಬೆಳಿಗ್ಗೆ 10.30ಗಂಟೆಗೆ ದೇವರಿಗೆ ದರ್ಬೆ ದಿಗ್ಬಂಧನ ಹಾಕಿ ಬಾಗಿಲು ಮುಚ್ಚಲಾಯಿತು. ಸಾಮಾನ್ಯವಾಗಿ ಮಂಗಳವಾರದಂದು ಘಾಟಿ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಂದು ಗ್ರಹಣದ ಹಿನ್ನೆಲೆಯಲ್ಲಿ ಬೆಳಿಗ್ಗಿನಿಂದಲೇ ಸಾವಿರಾರು ಭಕ್ತರು ಆಗಮಿಸಿ‌ ಗ್ರಹಣ ಆರಂಭಕ್ಕೂ ಮುನ್ನ ದೇವರ ದರ್ಶನ ಪಡೆದರು.

ಸಂಜೆ ಚಂದ್ರಗ್ರಹಣ ಮುಕ್ತಾಯದ ನಂತರ ದೇವಸ್ಥಾನವನ್ನು ಶುಚಿಗೊಳಿಸಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊ ಡಲಾಯಿತು. ತಾಲ್ಲೂಕಿನಲ್ಲಿ ಸಂಜೆ 6.10ರ ಸುಮಾರಿನಲ್ಲಿ ಚಂದ್ರಗ್ರಹಣ ಅಲ್ಪಪ್ರಮಾಣದಲ್ಲಿ ಕಂಡು ಬಂತು. ಚಂದ್ರನ ಬಲಭಾಗದ ಮೇಲ್ಭಾಗದ ಅಂಚಿನಲ್ಲಿ ಭೂಮಿಯ ನೆರಳಿನಿಂದ ಕಪ್ಪಾಗಿರುವ ಭಾಗ ಕಂಡು ಬಂದಿತು. ಸಂಜೆ 6.30ರ ಸುಮಾರಿಗೆ ಕೆಂಪಾಗಿರುವ ಚಂದ್ರನ ಪೂರ್ಣ ಬಿಂಬ ಗೋಚರಿಸಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.