ದೇವನಹಳ್ಳಿ: ಗುಣಮಟ್ಟದ ಹಾಲಿನ ಉತ್ಪನ್ನ ವಿದೇಶಕ್ಕೆ ರಫ್ತು ಮಾಡುವ ಚಿಂತನೆ ಇದೆ ಎಂದು ಬಮೂಲ್ ಒಕ್ಕೂಟ ಕೇಂದ್ರ ಕಚೇರಿ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಟಿ.ಗೋಪಾಲ್ ಹೇಳಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ ದೇವನಹಳ್ಳಿ ಶಿಬಿರ ಕಚೇರಿಯಿಂದ ಏರ್ಪಡಿಸಿದ್ದ ತಾಲ್ಲೂಕು ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಮತ್ತು ಸಿಬ್ಬಂದಿ ಮಕ್ಕಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರದಲ್ಲಿ ಚೆಕ್ ವಿತರಿಸಿ ಮಾತನಾಡಿದರು.
ಬಮೂಲ್ ಒಕ್ಕೂಟ ರಾಜ್ಯದಲ್ಲಿಯೇ ಮಾರಾಟ ಮತ್ತು ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ದಿನವೊಂದಕ್ಕೆ ಸರಾಸರಿ 18ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಪ್ರಥಮ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಕನಕಪುರದಲ್ಲಿ ₹500ಕೋಟಿ ವೆಚ್ಚದಲ್ಲಿ ಹಾಲಿನ ಶೀತಲೀಕರಣ ಕೇಂದ್ರ ಮತ್ತು ಹಾಲಿನ ವಿವಿಧ ಉತ್ಪನ್ನ ತಯಾರಿಸುವ ಘಟಕ ಆರಂಭಗೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ನಿಸರ್ಗ ನಾರಾಯಣಸ್ವಾಮಿ, ಶ್ರಮಜೀವಿ ಹಾಲು ಉತ್ಪಾದಕರ ಮಕ್ಕಳಿಗೆ ಪ್ರೋತ್ಸಾಹಧನ ನೀಡುವುದು ಉತ್ತಮ ಬೆಳವಣಿಗೆ. ಪ್ರೋತ್ಸಾಹಧನ ಅನೇಕ ವರ್ಷಗಳ ಹಿಂದೆ ಇರಲಿಲ್ಲ. ಈಚೆಗೆ ಎಲ್ಲ ಸಹಕಾರ ಸಂಘಗಳಲ್ಲಿ ಹೆಚ್ಚುತ್ತಿದೆ. ಬಮೂಲ್ ಒಕ್ಕೂಟ ಪಶುಪಾಲಕರಿಗೆ ಮತ್ತು ಅವರ ಮಕ್ಕಳಿಗೆ ಪ್ರೋತ್ಸಾಹದಾಯಕ ಯೋಜನೆ ಉಚಿತ ಮತ್ತು ರಿಯಾಯಿತಿಯಲ್ಲಿ ನೀಡುತ್ತಿದೆ. ಸದುಪಯೋಗಪಡಿಸಿಕೊಳ್ಳಬೇಕೆಂದು ಎಂದು ಹೇಳಿದರು.
ಸಹಕಾರ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಬಮೂಲ್ ನಿರ್ದೇಶಕರ ಶ್ರಮ ಬಹಳಷ್ಟಿದೆ. ಕಟ್ಟಡದ ನಿರ್ಮಾಣಕ್ಕೆ ₹2ರಿಂದ 3ಲಕ್ಷ ಶಾಸಕರ ಅನುದಾನದಲ್ಲಿ ನೀಡಲಾಗಿದೆ. ಮಾರಕ ರೋಗಗಳಿಂದ ಬಳಲುತ್ತಿರುವ ನೂರಾರು ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹1.8ಕೋಟಿ ಮೊತ್ತ ವಿತರಿಸಲಾಗಿದೆ ಎಂದು ಹೇಳಿದರು.
ಬಮೂಲ್ ನಿರ್ದೇಶಕ ಕೆ.ಎಸ್.ಕೇಶವಮೂರ್ತಿ ಮಾತನಾಡಿ, ಹೈನು ಉದ್ಯಮ ಸಶಕ್ತವನ್ನಾಗಿಸಲು ಚಾಪ್ ಕಟ್ಟರ್, ಹಾಲು ಕರೆಯುವ ಯಂತ್ರ, ಕೊಟ್ಟಿಗೆ ಮ್ಯಾಟ್ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಮೂಲ್ ನಿರ್ದೇಶಕ ಬಿ.ಶ್ರೀನಿವಾಸ್, ಒಕ್ಕೂಟದಿಂದ ಪಶುಆಹಾರ ತಯಾರಿಕಾ ಘಟಕ ಆರಂಭಿಸಲು ಬಮೂಲ್ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಾಪ್ ಕಾಮ್ ಉಪಾಧ್ಯಕ್ಷ ಬಿ.ಮುನೇಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾ, ಬಮೂಲ್ ನಿರ್ದೇಶಕ ಆನಂದ್ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರಾಧಮ್ಮ ಮುನಿರಾಜು, ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಎ.ಸಿ.ನಾಗರಾಜ್, ನಿರ್ದೇಶಕರಾದ ಸಂಪಂಗಿಗೌಡ, ಶ್ರೀನಿವಾಸ್, ಎ.ಪಿ.ಎಂ.ಸಿ.ಅಧ್ಯಕ್ಷ ಕೆ.ವಿ.ಮಂಜುನಾಥ್, ಜೆಡಿಎಸ್ ತಾಲ್ಲೂಕು ಘಟಕ ಕಾರ್ಯಾಧ್ಯಕ್ಷ ಆರ್.ಮುನೇಗೌಡ, ಹಾಪ್ ಕಾಮ್ ನಿರ್ದೇಶಕ ಎಚ್.ಶ್ರೀನಿವಾಸ್, ಟಿ.ಎ.ಪಿ.ಎಂ.ಸಿ.ಎಸ್ ಅಧ್ಯಕ್ಷ ಶ್ರೀರಾಮಯ್ಯ, ನಿರ್ದೇಶಕ ಮಂಡಿಬೆಲೆ ರಾಜಣ್ಣ, ಬಮೂಲ್ ಶಿಬಿರ ಕಚೇರಿ ಉಪ ವ್ಯವಸ್ಥಾಪಕರಾದ ಡಾ.ಗಂಗಯ್ಯ, ಡಾ.ಆರ್.ಪ್ರಭಾಕರ್, ಡಾ.ಶಿವಾಜಿನಾಯ್ಕ, ಸಹಾಯಕ ವ್ಯವಸ್ಥಾಪಕ ಮುನಿರಾಜೇಗೌಡ, ಡಿಸಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.