ADVERTISEMENT

ರಾಗಿ ಬೆಳೆ ಬಂಪರ್‌ ನಿರೀಕ್ಷೆ

ಆನೇಕಲ್‌ ತಾಲ್ಲೂಕಿನ 5,660 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ

ಆನೇಕಲ್ ಶಿವಣ್ಣ
Published 19 ಅಕ್ಟೋಬರ್ 2020, 3:16 IST
Last Updated 19 ಅಕ್ಟೋಬರ್ 2020, 3:16 IST
ಆನೇಕಲ್ ತಾಲ್ಲೂಕಿನ ಗೌರೇನಹಳ್ಳಿ ಬಳಿ ಬೆಳೆದು ನಿಂತಿರುವ ರಾಗಿ ಬೆಳೆಯ ನೋಟ
ಆನೇಕಲ್ ತಾಲ್ಲೂಕಿನ ಗೌರೇನಹಳ್ಳಿ ಬಳಿ ಬೆಳೆದು ನಿಂತಿರುವ ರಾಗಿ ಬೆಳೆಯ ನೋಟ   

ಆನೇಕಲ್: ರಾಗಿ ಕಣಜವೆಂದು ಪ್ರಸಿದ್ಧಿ ‍ಪಡೆದಿರುವ ಆನೇಕಲ್‌ ತಾಲ್ಲೂಕಿನಲ್ಲಿ ಈ ವರ್ಷ ವಾಡಿಕೆ ಮಳೆಗಿಂತ ಶೇಕಡ 22ರಷ್ಟು ಹೆಚ್ಚು ಮಳೆಯಾಗಿದೆ. ರಾಗಿ ಬೆಳೆ ಚೆನ್ನಾಗಿಬೆಳೆದಿದ್ದು, ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ.

ಸೆಪ್ಟೆಂಬರ್‌ವರೆಗಿನ ವಾಡಿಕೆ ಮಳೆ ಪ್ರಮಾಣ 439 ಮಿ.ಮೀ. ಆದರೆ, ಈ ವರ್ಷ 533 ಮಿ.ಮೀ. ಮಳೆಯಾಗಿದೆ. ರಾಗಿ ಬೆಳವಣಿಗೆಯ ವಿವಿಧ ಹಂತಗಳಾದ ಬಿತ್ತನೆ, ಬೆಳವಣಿಗೆ, ಕಾಳು ಕಟ್ಟುವುದು ಈ ಮೂರು ಹಂತಗಳಲ್ಲಿಯೂ ಮಳೆಯ ಸಮಸ್ಯೆಯಿಲ್ಲದೇ ಉತ್ತಮವಾಗಿ ನೀರಿನ ಪೂರೈಕೆಯಾಗಿರುವುದರಿಂದ ಪೂರ್ಣ ಪ್ರಮಾಣದಲ್ಲಿ ಬೆಳೆಯು ರೈತರ ಕೈಗೆಟುಕುವ ನಿರೀಕ್ಷೆಯಿದೆ.

ತಾಲ್ಲೂಕಿನ ಚಿಕ್ಕಹೊಸಹಳ್ಳಿ, ಇಂಡ್ಲವಾಡಿ, ತಮ್ಮನಾಯಕನಹಳ್ಳಿ, ಚೂಡಹಳ್ಳಿ, ಸಮಂದೂರು, ಗೆರಟಿಗನಬೆಲೆ, ಭಕ್ತಿಪುರ, ದಾಸನಪುರ, ಮಾಯಸಂದ್ರ, ಕರ್ಪೂರು, ಬೆಸ್ತಮಾನಹಳ್ಳಿ ಸೇರಿದಂತೆ ತಾಲ್ಲೂಕಿನಾದ್ಯಂತ 5,750 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯ ಗುರಿ ಹೊಂದಲಾಗಿತ್ತು. 5660 ಹೆಕ್ಟೇರ್‌ನಲ್ಲಿ ಬೆಳೆ ಬೆಳೆದಿದ್ದು ಶೇಕಡ 98ರಷ್ಟು ಗುರಿ ಸಾಧನೆ ಮಾಡಲಾಗಿದೆ. ಈ ಪೈಕಿ ಆನೇಕಲ್‌ ಕಸಬಾದಲ್ಲಿ 2720 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಉಳಿದ ಹೋಬಳಿಗಳಿಗಿಂತ ಹೆಚ್ಚಾಗಿದೆ. ಅತ್ತಿಬೆಲೆಯಲ್ಲಿ 550 ಹೆಕ್ಟೇರ್, ಜಿಗಣಿಯಲ್ಲಿ 1,100 ಹೆಕ್ಟೇರ್‌ ಮತ್ತು ಸರ್ಜಾಪುರದ 1,250 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ.

ADVERTISEMENT

ದ್ವಿದಳಧಾನ್ಯಗಳು ಉತ್ತಮ ಬೆಳೆಯಾಗಿದ್ದು ಫಸಲಿನ ನಿರೀಕ್ಷೆಯಲ್ಲಿದ್ದಾರೆ. ತೊಗರಿ 115 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಅಲಸಂದೆ 611 ಹೆಕ್ಟೇರ್‌, ಅವರೆ 605 ಹೆಕ್ಟೇರ್‌ ಸೇರಿದಂತೆ ಒಟ್ಟು 790 ಹೆಕ್ಟೇರ್‌ನಲ್ಲಿ ದ್ವಿದಳಧಾನ್ಯಗಳ ಬಿತ್ತನೆಯಾಗಿದೆ. ನೆಲಗಡಲೆ, ಎಳ್ಳು, ಹುಚ್ಚೆಳ್ಳು, ಸಾಸಿವೆ ಸೇರಿದಂತೆ ವಿವಿಧ ಎಣ್ಣೆ ಕಾಳುಗಳು 114 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿವೆ.

ತಾಲ್ಲೂಕಿನ ಎಲ್ಲೆಡೆ ರಾಗಿ, ದ್ವಿದಳಧಾನ್ಯಗಳ ಬೆಳೆಗಳು ನಳನಳಿಸುತ್ತಿವೆ. ಆನೇಕಲ್ ತಾಲ್ಲೂಕಿಗೆ ‘ರಾಗಿ ಕಣಜ’ ಎಂಬ ಹೆಸರಿದೆ. ಈ ಗತವೈಭವಕ್ಕೆ ಮತ್ತೆ ಮರಳುವ ವಿಶ್ವಾಸವಿದೆ. ಕಳೆದ ಹತ್ತು ವರ್ಷಗಳಿಗಿಂತ ಉತ್ತಮ ಬೆಳೆ ಬಂದಿದೆ. ಎಲ್ಲಿಯೂ ಮಳೆಯ ಕೊರತೆಯಾಗಲಿಲ್ಲ ಎಂದು ರೈತರು ಹೇಳುತ್ತಾರೆ.

‘ರೈತರಿಗೆ ಕೊಯ್ಲಿಗೆ ಅನುಕೂಲವಾಗುವಂತೆ ಕೊಯ್ಲು ಯಂತ್ರಗಳು, ಟ್ರ್ಯಾಕ್ಟರ್‌, ಟಿಲ್ಲರ್‌ ಸೇರಿದಂತೆ ಹಲವು ಕೃಷಿ ಯಂತ್ರಗಳನ್ನು ಕೃಷಿ ಯಾಂತ್ರೀಕರಣ ಯೋಜನೆಯಡಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ, ತುಂತುರು ನೀರಾವರಿ, ಸಸ್ಯ ಸಂರಕ್ಷಣಾ ಕಾರ್ಯಕ್ರಮ ರೂಪಿಸಲಾಗಿದೆ. ರೈತರು ಸರ್ಕಾರದ ಈ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು’ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಧನಂಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.