ADVERTISEMENT

ಸಚಿವ ಕೆ.ಎಚ್‌. ಮುನಿಯಪ್ಪ ಬ್ಯಾಡ್ಮಿಂಟನ್‌ ಆಟಕ್ಕೆ ಮನಸೋತ ಪ್ರೇಕ್ಷಕರು!

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 16:06 IST
Last Updated 14 ಸೆಪ್ಟೆಂಬರ್ 2024, 16:06 IST
ದೇವನಹಳ್ಳಿ ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ರಾಜ್ಯ ಮಟ್ಟದ ಶೆಟಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಗೆ ಸಚಿವ ಕೆ.ಎಚ್‌.ಮುನಿಯಪ್ಪ ಚಾಲನೆ ನೀಡಿದರು.
ದೇವನಹಳ್ಳಿ ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ರಾಜ್ಯ ಮಟ್ಟದ ಶೆಟಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಗೆ ಸಚಿವ ಕೆ.ಎಚ್‌.ಮುನಿಯಪ್ಪ ಚಾಲನೆ ನೀಡಿದರು.   

ದೇವನಹಳ್ಳಿ: ಇಲ್ಲಿಯ ವೇಣುಗೋಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ರಾಜ್ಯ ಮಟ್ಟದ ಶೆಟಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಗೆ ಚಾಲನೆ ನೀಡಲು ರಾಕೆಟ್‌ ಹಿಡಿದ 76 ವರ್ಷದ ಸಚಿವ ಕೆ.ಎಚ್‌. ಮುನಿಯಪ್ಪ ಯುವ ಆಟಗಾರರಿಗೆ ಭಾರಿ ಪೈಪೋಟಿ ನೀಡಿ ಚಪ್ಪಾಳೆ ಗಿಟ್ಟಿಸಿದರು.

ಮೂರು ಸುತ್ತು ಆಡಿದರೂ ಸುಸ್ತಾಗದೆ ಎದುರಾಳಿ ಆಟಗಾರರ ಬೆವರಿಳಿಸಿದರು. ಸಹ ಆಟಗಾರರು ಮತ್ತು ಎದುರಾಳಿ ಆಟಗಾರರು  ಸುಸ್ತಾದರೂ ಮುನಿಯಪ್ಪ ಅವರು ಒಂಚೂರು ಸುಸ್ತಾಗದೆ ಆಟವಾಡಿದರು. ಪ್ರತಿಬಾರಿ ವೇಗದಲ್ಲಿ ಶೆಟಲ್‌ ವಾಪಸ್‌ ಕಳಿಸಿದಾಗ ವೀಕ್ಷಕರು ಸಿಳ್ಳೆ, ಚಪ್ಪಳೆ ಮೂಲಕ ಮುನಿಯಪ್ಪ ಅವರನ್ನು ಪ್ರೋತ್ಸಾಹಿಸಿದರು.

ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಭಾಗಗಳ ಒಟ್ಟು 75 ತಂಡಗಳು ಭಾಗವಹಿಸಿವೆ. 19 ವರ್ಷ ವಯೋಮಿತಿಯೊಳಗಿನ ಪುರುಷ, ಮಹಿಳೆಯ ವಿಭಾಗದಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್, 15 ವರ್ಷ ವಯೋಮಿತಿಯಲ್ಲಿ ಪುರುಷರ ಸಿಂಗಲ್ಸ್ ಪಂದ್ಯನಡೆಯಲಿವೆ. 

ADVERTISEMENT

ಪಂದ್ಯಾವಳಿ ಬಳಿಕ ಮಾತನಾಡಿದ ಮುನಿಯಪ್ಪ, ವಿಶ್ವದಲ್ಲಿಯೇ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಹೆಚ್ಚು ಪದಕ ಜಯಿಸಬೇಕು. ಇದಕ್ಕಾಗಿ ಕ್ರೀಡಾಪಟುಗಳ ತಯಾರಿಗೆ ಕಠಿಣ ತರಬೇತಿ ನೀಡಬೇಕು ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಸಿ.ಜಗನ್ನಾಥ್‌, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್‌.ರವಿ ಕುಮಾರ್‌, ಒಳಾಂಗಣ ಕ್ರೀಡಾಂಗಣ ಸಮಿತಿಯ ಅಧ್ಯಕ್ಷ ವಿ.ಮಂಜುನಾಥ್‌, ಪುರಸಭೆ ಸದಸ್ಯರಾದ ಆರ್‌.ರಘು, ಜಿ.ಎ ರವೀಂದ್ರ, ಮುನಿಕೃಷ್ಣ, ಕ್ರೀಡಾಪಟುಗಳಾದ ಡಿ.ಎಂ.ವೇಣುಗೋಪಾಲ್‌, ಧನಂಜಯ್‌, ಅಂಬರೀಷ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.