ಹೊಸಕೋಟೆ: ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.
ಶರತ್ ಬಚ್ಚೇಗೌಡ ಅವರು ಪತ್ನಿ ಪ್ರತಿಭಾ ಶರತ್, ತಾಯಿ ಅವರೊಂದಿಗೆ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದಲ್ಲಿರುವ ಸೌಮ್ಯ ಚನ್ನಕೇಶವ ದೇಗುಲಕ್ಕೆ ಭೇಟಿ ನೀಡಿ, ನಾಮಪತ್ರವನ್ನು ದೇವರ ಮುಂದೆ ಇಟ್ಟು ಪೂಜೆ ಸಲ್ಲಿಸಿದರು.
ನಂತರ ನಗರದ ಕಚೇರಿಗೆ ಆಗಮಿಸಿ, ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ಕಾರ್ಯಕರ್ತರನ್ನು ಹುರುದುಂಬಿಸಿದರು. ಕಲಾ ತಂಡಗಳ ವಾದ್ಯ, ಮೇಳ ಆಗಸಕ್ಕೆ ಮುಟ್ಟುವಂತೆ ಸದ್ದು ಮಾಡಿದವು. ಶರತ್ ಕಾರಿನಿಂದ ಇಳಿಯುತ್ತಿದ್ದಂತೆ ತಕ್ಷಣ ಅವರನ್ನು ಹೆಗಲ ಮೇಲೆ ಹೊತ್ತು ಅಭಿಮಾನಿಗಳು ಜೈ ಕಾರ ಕೂಗಿದರು. ಹೊಸಕೋಟೆ ಪಟ್ಟಣದ ಶಾಸಕರ ಕಚೇರಿಯಿಂದ ಎರಡು ಕೀ.ಮಿ ವರೆಗೆ ಹೆಗಲ ಮೇಲೆ ಹೊತ್ತು ಸಾಗಿದರು.
ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದ ಶರತ್ ಅದನ್ನು ಹಾರಾಡಿಸುವ ಮೂಲಕ ಗಮನ ಸೆಳೆದರು. ಶಾಸಕರ ಕಚೇರಿಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ಸಾಗಿದರು. ವಿವಿಧ ಭಾಗಗಳಿಂದ ಅಭಿಮಾನಿಗಳು ರಸ್ತೆಯ ಅಕ್ಕ ಪಕ್ಕದ ಮಹಡಿಗಳ ಮೇಲೇರಿ ಕೈ ಬಿಸಿ ಶುಭಾಶಯ ಕೋರಿದರು. ರಸ್ತೆಯುದ್ದಕ್ಕೂ ಕಾರ್ಯಕರ್ತರು ಹೂವಿನ ಸುರಿಮಳೆ ಸುರಿಸಿದರು.
ಪಟ್ಟಣದ ತುಂಬುಲ್ಲೆ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಪ್ರತಿಯೊಬ್ಬರ ಶರತ್ ಬಚ್ಚೇಗೌಡ ಅವರ ಭಾವಚಿತ್ರವುಳ್ಳ ಟೀ ಶರ್ಟ್ ಧರಿಸಿ, ಕಾಂಗ್ರೆಸ್ ಬಾವುಟ ಹಿಡಿದು, ಬಿರು ಬಿಸಿಲಿನ ಬೇಗೆಯಲ್ಲಿಯೂ ನೆಚ್ಚಿನ ಯುವ ನಾಯಕನ ಪರ ಘೋಷಣೆಗಳು ಮೊಳಗಿಸಿದರು. ಮಧ್ಯಾಹ್ನದವರೆಗೂ ನಗರವೂ ಸಂಪೂರ್ಣ ರಾಜಕೀಯ ರಣರಂಗವಾಗಿ ಬದಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.