ADVERTISEMENT

ಹೊಸಕೋಟೆ ಮಾದರಿ ತಾಲ್ಲೂಕಿನ ಸಂಕಲ್ಪ: ಶರತ್ ಬಚ್ಚೇಗೌಡ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 13:52 IST
Last Updated 15 ಡಿಸೆಂಬರ್ 2019, 13:52 IST
ಹೊಸಕೋಟೆ ತಾಲ್ಲೂಕಿನ ರಾಂಪುರ-ಕದಿರಿನಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು
ಹೊಸಕೋಟೆ ತಾಲ್ಲೂಕಿನ ರಾಂಪುರ-ಕದಿರಿನಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು   

ಸೂಲಿಬೆಲೆ: ‘ಹೊಸಕೋಟೆ ತಾಲ್ಲೂಕಿನಲ್ಲಿ ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು, ಮಾದರಿ ತಾಲ್ಲೂಕನ್ನಾಗಿ ನಿರ್ಮಾಣ ಮಾಡುವ ಸಂಕಲ್ಪ ತೊಟ್ಟಿದ್ದು, ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತನಾಗುತ್ತೇನೆ’ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ರಾಂಪುರ - ಕದಿರಿನಪುರ ಗ್ರಾಮದಲ್ಲಿ ಭಾನುವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

‘ಹೈನು ಉದ್ಯಮಕ್ಕೆ ಪ್ರೋತ್ಸಾಹ ನೀಡಿ ಕ್ಷೀರ ಕ್ರಾಂತಿ ಮಾಡುವುದರ ಮೂಲಕ ರಾಜ್ಯದಲ್ಲಿ ಹೊಸಕೋಟೆ ತಾಲ್ಲೂಕನ್ನು ಹೈನುಗಾರಿಕೆಯಲ್ಲಿ ಅತ್ಯುನ್ನತ ಶ್ರೇಣಿಗೆ ಕೊಂಡೊಯ್ಯಬೇಕಿದೆ. ತಾಲ್ಲೂಕಿನಲ್ಲಿ ಸುಮಾರು 20 ಎಕರೆ ಜಾಗ ಗುರುತಿಸಿ ಬೆಂಗಳೂರು ಹಾಲು ಒಕ್ಕೂಟಕ್ಕೆ ನೀಡುವ ಮೂಲಕ, ತಾಲ್ಲೂಕಿನಲ್ಲಿ ಕ್ಯಾಟಲ್ ಫೀಡಿಂಗ್ ಪ್ಲಾಂಟ್ ಪ್ರಾರಂಭಕ್ಕೆ ತ್ವರಿತವಾಗಿ ಕ್ರಮ ಜರುಗಿಸಲಾಗುವುದು. ರಾಂಪುರ ಗ್ರಾಮಕ್ಕೆ ಕುಡಿಯುವಶುದ್ಧ ನೀರಿನ ಘಟಕ ನಿರ್ಮಿಸಲಾಗುವುದು’ ಎಂದು ಆಶ್ವಾಸನೆ ನೀಡಿದರು.

ADVERTISEMENT

ಹೊಸಕೋಟೆ ಟಿಎಪಿಸಿಎಂಎಸ್ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ ಮಾತನಾಡಿ, ‘ತಾಲ್ಲೂಕು ಹೈನೋದ್ಯಮದಲ್ಲಿ ವರ್ಷದಿಂದ ವರ್ಷಕ್ಕೆ ಸಾಕಷ್ಟು ಪ್ರಗತಿ ಸಾಧಿಸುತ್ತಿದೆ. 70 ಡೈರಿಗಳಿದ್ದ ತಾಲ್ಲೂಕು, ಬಮೂಲ್ ನಿರ್ದೇಶಕರಾಗಿ ಸಿ.ಮಂಜುನಾಥ್ ಅಧಿಕಾರ ವಹಿಸಿಕೊಂಡ ನಂತರ 163ಕ್ಕೆ ಏರಿಕೆ ಆಗಿದೆ. ಪ್ರತಿ ದಿನ 1.30 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು, ಡೇರಿಗಳು ಲಾಭದಾಯಕವಾಗಿವೆ’ ಎಂದರು.

ಬಮೂಲ್ ನಿರ್ದೇಶಕ ಸಿ.ಮಂಜುನಾಥ್ ಮಾತನಾಡಿ, ‘ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ, ಜನವರಿಯಿಂದ ₹ 2 ಹೆಚ್ಚಿನ ಪ್ರೋತ್ಸಾಹ ಧನವನ್ನು ಬಮೂಲ್‌ನಿಂದ ನೀಡಲಾಗುತ್ತದೆ. ₹ 5 ನೀಡುವಂತೆ ಸರ್ಕಾರಕ್ಕೂ ಮನವಿ ಸಲ್ಲಿಸಲಾಗಿದೆ. ಸಂಘಗಳಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದೆ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದರು.

ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ, ಬಮೂಲ್ ಹೊಸಕೋಟೆ ಶಿಬಿರದ ಉಪ ವ್ಯವಸ್ಥಾಪಕ ಶಿವಾಜಿ ನಾಯಕ್, ವಿಜಯ್ ಭಾಸ್ಕರ್, ನಿವೃತ್ತ ವಿಸ್ತರಣಾಧಿಕಾರಿ ವೆಂಕಟೇಶಪ್ಪ, ಅಂಕೋನಹಳ್ಳಿ ಶ್ರೀನಿವಾಸ್, ಡೇರಿ ಅಧ್ಯಕ್ಷ ಅಶ್ವಥ್ ನಾರಾಯಣ್, ಮುಖ್ಯ ಕಾರ್ಯನಿರ್ವಾಹಕ ಬಿ.ಮಹದೇವ್, ಪರಿವೀಕ್ಷಕ ನಾರಾಯಣಸ್ವಾಮಿ, ನಿರ್ದೇಶಕರಾದ ರುದ್ರಮರಿ, ಶಂಕರಪ್ಪ, ರಾಧಮ್ಮ, ಪ್ರೇಮ, ನಾರಾಯಣಮ್ಮ, ನಂಜುಂಡಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.