ಆನೇಕಲ್: ದೇಶದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಹೆಚ್ಚು ಕೋಮುಗಲಭೆ ಸಂಭವಿಸಿದ್ದು, ಗಡಿಯಲ್ಲಿ ಯೋಧರು ಮರಣಹೊಂದಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದರು.
ಬೊಮ್ಮಸಂದ್ರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ವಿವಿಧೆಡೆ ಬಿಜೆಪಿ, ಬಜರಂಗದಳದಿಂದಾಗಿ ಹೆಚ್ಚು ಕೋಮುಗಲಭೆಗಳಾಗಿವೆ. ಕಾಂಗ್ರೆಸ್ ಪಕ್ಷ ಸಾಮರಸ್ಯವನ್ನು ಕಾಪಾಡುವ ಪಕ್ಷವಾಗಿದೆ. ಕೋಮುಗಲಭೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.
ಬಿಜೆಪಿ ಅಧಿಕಾರದ್ದಲ್ಲಿದ್ದ ನಾಲ್ಕು ವರ್ಷಗಳು ಪೊಲೀಸ್ ನೈತಿಕಗಿರಿಯನ್ನು ಮಾಡುತ್ತಿದ್ದರು. ಪಾರ್ಕ್, ಪಬ್‌ಗಳಲ್ಲಿ ಪೊಲೀಸ್ ನೈತಿಕಗಿರಿಯ ಮೂಲಕ ಹಲ್ಲೆ ಪ್ರಕರಣಗಳು ನಡೆದಿದೆ. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂಬುದು ಸರ್ಕಾರದ ಉದ್ದೇಶ ಎಂದರು.
ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಪರ್ಕ ಸಾಧಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಬಡ ಜನರು ಪರದಾಡುವಂತಾಗಿದೆ. ಬಿಜೆಪಿಯವರಿಗೆ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಬಿಜೆಪಿಯು ಬುರುಡೆ ಪಕ್ಷ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ಬಿಜೆಪಿಯ ಹಗರಣಗಳ ಬಗ್ಗೆ ತನಿಖೆ ಮಾಡಿದ್ದರೆ ಹಲವಾರು ಮುಖಂಡರುಗಳು ಜೈಲಿನಲ್ಲಿರುತ್ತಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ದ್ವೇಷ ರಾಜಕಾರಣ ಮಾಡುವುದಿಲ್ಲ. ಬಿಜೆಪಿಯ ಹಲವು ನಾಯಕರುಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯ ಕನಸು ಕಾಣುತ್ತಿದ್ದಾರೆ. ಕನಸು ಕಾಣಲು ಹಣ ನೀಡುವಂತಿಲ್ಲ. ಬಿಜೆಪಿ ಇನ್ನೂ 9 ವರ್ಷ ವಿರೋಧಪಕ್ಷದಲ್ಲೇ ಇರುತ್ತದೆ. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿರುತ್ತದೆ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.