ADVERTISEMENT

ಬಿಪಿಎಲ್‌ಗೆ ಕನಿಷ್ಠ 5 ಕೆ.ಜಿ ಅಕ್ಕಿ ನೀಡಿ: ಸಂಸದ ಬಿ.ಎನ್. ಬಚ್ಚೇಗೌಡ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 5:11 IST
Last Updated 24 ಏಪ್ರಿಲ್ 2021, 5:11 IST
ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಬಿ.ಎನ್. ಬಚ್ಚೇಗೌಡ
ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಬಿ.ಎನ್. ಬಚ್ಚೇಗೌಡ   

ಹೊಸಕೋಟೆ: ‘ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಭಾಗಗಳು ಬಯಲು ಸೀಮೆ ಭಾಗಗಳಾಗಿವೆ. ಈ ಭಾಗದಲ್ಲಿ ಅಕ್ಕಿ ಬೆಳೆ ಕಡಿಮೆ. ಬಿಪಿಲ್ ಕಾರ್ಡ್‌ದಾರರಿಗೆ ಕನಿಷ್ಠ 5 ಕೆಜಿ ಅಕ್ಕಿ ಹಾಗೂ 2 ರಿಂದ 3 ಕೆ.ಜಿ ರಾಗಿ ಅಥಾ ಗೋಧಿ ನೀಡದರೆ ಇದರಿಂದ ಬಡವರಿಗೆ ಹೆಚ್ಚಿನ ಉಪಕಾರವಾಗುತ್ತದೆ’ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಬಿ.ಎನ್. ಬಚ್ಚೇಗೌಡ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅವರು ಈ ಕುರಿತು ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈ ಭಾಗದ ರೈತರು ಹಿಂಗಾರು ಮಳೆ ಸಂದರ್ಭದಲ್ಲಿ ರಾಗಿ ಬೆಳೆಯನ್ನು ಸಾಮಾನ್ಯವಾಗಿ ಬೆಳೆಯುತ್ತಾರೆ. ಕಳೆದ ವರ್ಷ ರಾಗಿ ಬೆಳೆಯು ಚೆನ್ನಾಗಿ ಬಂದಿದ್ದು ಎಲ್ಲರ ಮನೆಯಲ್ಲಿಯೂ ರಾಗಿಯಿರುತ್ತದೆ. ಆದರೆ ಭತ್ತವನ್ನು ಕನಿಷ್ಠ ಪ್ರಮಾಣದಲ್ಲಿ ಬೆಳೆಯುವ ಈ ಭಾಗದ ಜನರಿಗೆ ಸರ್ಕಾರ ಬಿಪಿಲ್ ಕಾರ್ಡ್‌ದಾರರಿಗೆ ಕನಿಷ್ಠ ಐದು ಕೆಜಿ ಅಕ್ಕಿಯನ್ನಾದರೂ ನೀಡಬೇಕು. ಇದರಿಂದ ಮನೆಯಲ್ಲಿರುವ ಮಕ್ಕಳಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ಅನ್ನವನ್ನು ನೀಡಬಹುದು’ ಎಂದರು.

‘ಅಂಗಡಿಗಳಲ್ಲಿ ಇಂದಿನ ಬೆಲೆಯಲ್ಲಿ ಸಾಮಾನ್ಯ ಜನತೆ ಅಕ್ಕಿಯನ್ನು ಖರೀದಿಸುವುದು ಕಷ್ಟಸಾಧ್ಯವಾಗಿದ್ದು ಕೊರೊನಾ ಸಂದರ್ಭದಲ್ಲಿ ಜನತೆಯ ಸಮಸ್ಯೆಗೆ ರಾಜ್ಯ ಸರ್ಕಾರ ಸ್ಪಂದಿಸಬೇಕಾಗಿದೆ’ ಎಂದರು.

ADVERTISEMENT

‘ಕೇಂದ್ರ ಸರ್ಕಾರದಿಂದ ಶೇಕಡ 90ರಷ್ಟು ಪಡಿತರ ಬರುತ್ತಿದ್ದು ರಾಜ್ಯ ಸರ್ಕಾರ ಅದನ್ನು ಜನತೆಗೆ ನೀಡಿ ಜನರ ಸಂಕಷ್ಠಕ್ಕೆ ಸ್ಪಂದಿಸಬೇಕು’ ಎಂದರು.

‘ಕೊರೊನಾ ಸೋಂಕಿನ ಬಗ್ಗೆ ಬಹಳಷ್ಟು ಮಾಹಿತಿಯನ್ನು ಪಡೆದಿದ್ದು, ಇನ್ನೂ ಮೂರನೇ ಹಾಗೂ ನಾಲ್ಕನೇ ಅಲೆ ಮುಂದಿನ ದಿನಗಳಲ್ಲಿ ಬರುವ ಸಾಧ್ಯತೆಗಳಿವೆ. ಜನತೆ ಎಚ್ಚರಿಕೆಯಿಂದ ಜೀವನ ಸಾಗಿಸುವ ಅನಿವಾರ್ಯತೆ ಇದೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳು ಹೆಚ್ಚಿನ ಮುತುವರ್ಜಿ ವಹಿಸಿ ಸಂಕಷ್ಟಗಳಿಗೆಸ್ಪಂದಿಸಬೇಕಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.