ADVERTISEMENT

ಸೋಂಕು ತಡೆ: ಸರ್ಕಾರದ ಕ್ರಮಕ್ಕೆ ಸಂಸದ ಮೆಚ್ಚುಗೆ

300 ಮಂದಿಗೆ ಆಹಾರ ಕಿಟ್‌ ಪೂರೈಕೆ * ಕೋವಿಡ್‌ ನಿಯಂತ್ರಣಕ್ಕೆ ನೆರವಾದ ಫೀವರ್‌ ಕ್ಲಿನಿಕ್‌

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 4:15 IST
Last Updated 3 ಜೂನ್ 2021, 4:15 IST
ಹೊಸಕೋಟೆಯ ನಗರಸಭೆ ಆವರಣದಲ್ಲಿ ಪೌರ ಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಸಂಸದ ಬಿ.ಎನ್. ಬಚ್ಚೇಗೌಡ ಹಾಗೂ ಶಾಸಕ ಶರತ್ ಬಚ್ಚೇಗೌಡ ದಿನಸಿ ಕಿಟ್ ವಿತರಿಸಿದರು
ಹೊಸಕೋಟೆಯ ನಗರಸಭೆ ಆವರಣದಲ್ಲಿ ಪೌರ ಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಸಂಸದ ಬಿ.ಎನ್. ಬಚ್ಚೇಗೌಡ ಹಾಗೂ ಶಾಸಕ ಶರತ್ ಬಚ್ಚೇಗೌಡ ದಿನಸಿ ಕಿಟ್ ವಿತರಿಸಿದರು   

ಹೊಸಕೋಟೆ: ‘ಕೊರೊನಾ ಎರಡನೇ ಅಲೆ ತಡೆಯುವಲ್ಲಿ ರಾಜ್ಯ ಸರ್ಕಾರ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿದೆ. ಮತ್ತಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರೆ ಸಮಸ್ಯೆ ಉಲ್ಬಣವಾಗುವುದು ತಪ್ಪುತ್ತಿತ್ತು’ ಎಂದು ಸಂಸದ ಬಿ.ಎನ್. ಬಚ್ಚೇಗೌಡ ಅಭಿಪ್ರಾಯಪಟ್ಟರು.

ನಗರದ ನಗರಸಭೆ ಆವರಣದಲ್ಲಿ ಬುಧವಾರ ಆಶಾ ಕಾರ್ಯಕರ್ತೆಯರು ಹಾಗೂ ಪೌರ ಕಾರ್ಮಿಕರಿಗೆ ದಿನಸಿ ಕಿಟ್‌ ವಿತರಿಸಿ ಅವರು ಮಾತನಾಡಿದರು.

ಕೊರೊನಾ ಸಮಯದಲ್ಲಿ ಜನತೆ ಮನೆಯಿಂದ ಹೊರಬರುತ್ತಿಲ್ಲ. ನಗರವನ್ನು ಸ್ವಚ್ಛವಾಗಿಡುವ ಸಲುವಾಗಿ ಪೌರಕಾರ್ಮಿಕರು ಪ್ರತಿನಿತ್ಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಜನತೆ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ. ಅದಕ್ಕಾಗಿ ಬೆಂಡಗಾನಹಳ್ಳಿ ಕುಟುಂಬದವರು ಮತ್ತು ಇತರರು ಸೇರಿ ಅವರಿಗೆ ನೆರವಾಗಬೇಕೆಂಬ ಸಲುವಾಗಿ ದಿನಸಿ ಕಿಟ್‌ ನೀಡುತ್ತಿದ್ದೇವೆ ಎಂದರು.

ADVERTISEMENT

ದಿನಸಿ ಕಿಟ್‌ಗಳನ್ನು ಕೇವಲ ಪ್ರಚಾರಕ್ಕಾಗಿ ಕೊಡುತ್ತಿಲ್ಲ. ನಾವು ಕೊಡುವ ದಿನಸಿ ಕಿಟ್ ತೆಗೆದುಕೊಂಡವರಿಗೆ ಕನಿಷ್ಠ ಕೆಲವು ದಿನಗಳಾದರೂ ಉಪಯೋಗಕ್ಕೆ ಬರಬೇಕು. ಅದಕ್ಕಾಗಿ ಸುಮಾರು ಮೂರು ಸಾವಿರ ರೂಪಾಯಿ ಮೌಲ್ಯದ ಕಿಟ್ ನೀಡಲಾಗುತ್ತಿದೆ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈಗ ಕೊರೊನಾ ಇಳಿಮುಖವಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕಿನಲ್ಲಿ ತಾವು ಪ್ರವಾಸ ಮಾಡಿದ್ದು, ಫ್ರಂಟ್‌ಲೈನ್ ವಾರಿಯರ್ಸ್‌ ಬಹಳ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಎರಡು ದೊಡ್ಡ ಆಸ್ಪತ್ರೆಗಳಿವೆ. ದೇವನಹಳ್ಳಿಯ ಆಕಾಶ್ ಆಸ್ಪತ್ರೆ ಮತ್ತು ಹೊಸಕೋಟೆಯ ಎಂವಿಜೆ ಆಸ್ಪತ್ರೆಗಳಲ್ಲಿ ಸುಮಾರು 800 ಹಾಸಿಗೆಗಳಿದ್ದು, ಕೊರೊನಾ ಸೋಂಕಿತರನ್ನು ಸೇರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಹೊಸಕೋಟೆ ತಾಲ್ಲೂಕಿನಲ್ಲಿ ಉಳಿದ ತಾಲ್ಲೂಕುಗಳಿಗಿಂತ ಹೆಚ್ಚು ಆಸ್ಪತ್ರೆಗಳಿದ್ದು ಚಿಕಿತ್ಸೆಗೆ ಅನುಕೂಲವಾಗಿದೆ. ಶಾಸಕ ಶರತ್ ಬಚ್ಚೇಗೌಡ ಉತ್ತಮವಾಗಿ ಕೆಲಸ ಮಾಡುತ್ತಿದ್ದು ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಜಾರಿಗೆ ತಂದಿರುವ ಫೀವರ್‌ ಕ್ಲಿನಿಕ್ ಒಳ್ಳೆಯ ಕೆಲಸ ಮಾಡಿದ್ದು ಸೋಂಕನ್ನು ಪ್ರಾಥಮಿಕ ಹಂತದಲ್ಲಿಯೇ ತಡೆಯಲು ಸಹಕಾರಿಯಾಗಿದೆ ಎಂದು
ತಿಳಿಸಿದರು.

ಕೇಂದ್ರ ಸರ್ಕಾರದ ಭವಿಷ್ಯ ನಿಧಿ ಸದಸ್ಯ ವಿಜಯ್ ಕುಮಾರ್‌ ಮಾತನಾಡಿ, ಕೊರೊನಾ ಸಮಯದಲ್ಲಿ ಸಂಸದರು ಮತ್ತು ಶಾಸಕರು ಜನತೆಯ ಸಮಸ್ಯೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಶಾಸಕರು ಕಳೆದ ಎರಡು ತಿಂಗಳಿನಿಂದ ತಾಲ್ಲೂಕಿನಾದ್ಯಂತ ಪ್ರವಾಸ ಮಾಡಿ ಸೋಂಕಿತರಿಗೆ ಹಾಸಿಗೆ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು
ಹೇಳಿದರು.

ಕಾರ್ಯಕ್ರಮದಲ್ಲಿ ಸುಮಾರು 300 ಜನರಿಗೆ ದಿನಸಿ ಕಿಟ್ ನೀಡಲಾಯಿತು. ಶಾಸಕ ಶರತ್ ಬಚ್ಚೇಗೌಡ, ನಗರಸಭಾ ಸದಸ್ಯರಾದ ಕೇಶವಮೂರ್ತಿ, ಮುಖಂಡರಾದ ಭೈರೇಗೌಡ, ಸತೀಶ್ ಗೌಡ, ಸುಬ್ಬರಾಜು, ವಿಜಯ್ ಕುಮಾರ್‌, ರಾಕೇಶ್, ರೋಟರಿ ಸಂಸ್ಥೆಯ ರಾಜಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.