ಹೊಸಕೋಟೆ: ‘ಕಾಂಗ್ರೆಸ್ ಬಿಡುವ ಮುಂಚೆಯೇ ಯಡಿಯೂರಪ್ಪನವರು ನನ್ನನ್ನು ಸಂಸದ ಬಚ್ಚೇಗೌಡರ ಬಳಿ ಕರೆದೊಯ್ದು ಪಕ್ಷಕ್ಕೆ ಸೇರಿಸಿಕೊಳ್ಳುವುದಾಗಿ ತಿಳಿಸಿದ್ದರು. ಆಗ ಪಕ್ಷ ಸೇರ್ಪಡೆಗೆ ಮತ್ತು ನನಗೆ ವಿಧಾನಸಭಾ ಟಿಕೆಟ್ ಕೊಡಲು ಒಪ್ಪಿದ್ದರು. ಈಗ ಬೇಡವೆಂದು ಅಪ್ಪ ಮತ್ತು ಮಗ ಮೋಸ ಮಾಡುತ್ತಿದ್ದಾರೆ’ ಎಂದು ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ ಆರೋಪಿಸಿದ್ದಾರೆ.
ಅವರು ತಾಲ್ಲೂಕಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ಯಡಿಯೂರಪ್ಪನವರು ಕೇಳಿದಾಗ ಬಚ್ಚೇಗೌಡರೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಒಪ್ಪಿದ್ದರು. ಇಲ್ಲದಿದ್ದರೆ ನಾನೇಕೆ ರಾಜಿಮಾಮೆ ಕೊಟ್ಟು ಬರುತ್ತಿದ್ದೆ’ ಎಂದು ಕೇಳಿದರು.
‘ಶರತ್ ಬಚ್ಚೇಗೌಡರನ್ನು ಮುಂದಿನ ಲೋಕಸಭೆಗೆ ಅಭ್ಯರ್ಥಿ, ವಿಧಾನಪರಿಷತ್ ಸದಸ್ಯ ಅಥವಾ ನಿಗಮ– ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಗೃಹ ಮಂಡಳಿ ಅಧ್ಯಕ್ಷ ಸ್ಥಾನವನ್ನು ಮುಖ್ಯಮಂತ್ರಿಗಳು ಕೊಟ್ಟರು. ಅದು ಅತ್ಯಂತ ಪ್ರಮುಖ ಹುದ್ದೆ. ಅದನ್ನು ಸ್ವೀಕರಿಸಿದ್ದರೆ ಸಂಸದರಾದ ಬಚ್ಚೇಗೌಡರು, ಶರತ್ ಬಚ್ಚೇಗೌಡ ಹಾಗೂ ನಾನು ಮೂರೂ ಜನರು ಸೇರಿ ತಾಲ್ಲೂಕಿನ ಅಭಿವೃದ್ಧಿ ಮಾಡಬಹುದಿತ್ತು’ ಎಂದರು.
‘ಅದನ್ನು ಬಿಟ್ಟು ಯಾರದೋ ಮಾತು ಕೇಳಿ ಕಾಂಗ್ರೆಸ್ ಜತೆ ಮಾತುಕತೆ ನಡೆಸಿ ನನ್ನನ್ನು ಸೋಲಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ಯಾವುದೇ ಜಾತಿ, ಧರ್ಮ, ಭಾಷೆಯನ್ನು ನೋಡದೆ ಎಲ್ಲರನ್ನೂ ಪ್ರೀತಿಸುವ ಕಾರಣ ಮೂರು ಬಾರಿ ಗೆದ್ದಿದ್ದೇನೆ. ತಾಲ್ಲೂಕಿನಲ್ಲಿ ಬಾಕಿ ಇರುವ ಅಭಿವೃದ್ಧಿ ಕಾರ್ಯವನ್ನು ಮಾಡಲು ನನ್ನನ್ನು ಬೆಂಬಲಿಸಿ’ ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.