ವಿಜಯಪುರ: ನಗರ ಸೇರಿದಂತೆ ಹಳ್ಳಿಗಳಲ್ಲಿ ಶ್ರದ್ಧಾ- ಭಕ್ತಿಯಿಂದ ನಾಗರ ಪಂಚಮಿ ಹಬ್ಬ ಆಚರಿಸಲಾಯಿತು. ಹೊಸ ಬಟ್ಟೆ ತೊಟ್ಟ ಮಹಿಳೆಯರು, ಮಕ್ಕಳು ವಿವಿಧೆಡೆ ನಾಗ ದೇವಸ್ಥಾನಗಳು, ಹುತ್ತಗಳಿಗೆ ತೆರಳಿ ಹಾಲೆರೆದು ಭಕ್ತಿಯನ್ನು ಮೆರೆದರು. ಹುತ್ತಕ್ಕೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸಿ, ಹರಕೆ ತೀರಿಸಿದರು.
ಇಲ್ಲಿನ ಗುರಪ್ಪನಮಠದ ಬಳಿಯಿರುವ ಹುತ್ತ, ನಾಗರಬಾವಿಯ ಬಳಿಯಿರುವ ಹುತ್ತಗಳು, ಮಾಯಾ ಆಂಗ್ಲಶಾಲೆ, ಹಾಗೂ ಎವರ್ ಗ್ರೀನ್ ಶಾಲೆಯ ಸಮೀಪದ ನಾಗದೇವಸ್ಥಾನ ಸೇರಿದಂತೆ ಅಶ್ವಥ್ಥಕಟ್ಟೆಗಳ ಬಳಿರುವ ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸಿದರು.
ಬೆಳಿಗ್ಗೆಯಿಂದ ಮಹಿಳೆಯರು ಗುಂಪಾಗಿ ಕೂಡಿಕೊಂಡು ಪೂಜೆ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ಮಕ್ಕಳು, ಯುವತಿಯರು, ಮಹಿಳೆಯರು, ವೃದ್ಧೆಯರು ಸೇರಿದಂತೆ ಎಲ್ಲ ವಯೋಮಾನದವರು ಹುತ್ತ, ಮಂದಿರಗಳಿಗೆ ತೆರಳಿ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದರು.
ಹಬ್ಬಗಳಿಗೆ ಮುನ್ನುಡಿಯಾಗಿ ನಾಗರ ಪಂಚಮಿ ಹಬ್ಬ ಬಂದಿದೆ. ಈ ದಿನ ನಾಗದೇವತೆಗಳನ್ನು ಮನಸ್ಸಿನಲ್ಲಿ ಪ್ರಾರ್ಥಿಸಿ ಹಾವಿಗೆ ಹಾಲೆರೆದು ಮನೆಯಲ್ಲಿ ಸಿಹಿ ತಿಂಡಿಗಳನ್ನು ಮಾಡಿ ಸಂಭ್ರಮಿಸಲಾಗುವುದು. ಅಣ್ಣ-ತಂಗಿಯ ಬಾಂಧವ್ಯವನ್ನು ತಿಳಿಸುವ ಹಬ್ಬ ಇದಾಗಿದೆ. ಈ ಹಬ್ಬದ ಬಳಿಕ ವರ ಮಹಾಲಕ್ಷ್ಮಿ, ರಕ್ಷಾಬಂಧನ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಸಾಲು-ಸಾಲು ಹಬ್ಬಗಳು ಬಂದು ಜನರ ಸಂಭ್ರಮ ಹೆಚ್ಚಿಸಲಿದೆ. ಮನೆಯವರೆಲ್ಲ ಸೇರಿ ಎಲ್ಲರಿಗೂ ಒಳಿತಾಗಲಿ ಎಂದು ನಾಗ ದೇವತೆಯಲ್ಲಿ ಪ್ರಾರ್ಥಿಸುತ್ತಾರೆ ಎಂದು ಪೂಜೆಯಲ್ಲಿ ತೊಡಗಿಸಿಕೊಂಡಿದ್ದ ವರಲಕ್ಷ್ಮೀ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.