ADVERTISEMENT

ಶಿಕ್ಷಣ ಹಿಮ್ಮುಖಗೊಳಿಸುವ ಎನ್‌ಇಪಿ: ಬಿ.ಶ್ರೀಪಾದಭಟ್

ಹೊಸ ಶಿಕ್ಷಣ ನೀತಿ: ಸಾಧಕ, ಬಾಧಕ ಸಂವಾದ

​ಪ್ರಜಾವಾಣಿ ವಾರ್ತೆ
Published 28 ಜೂನ್ 2023, 14:18 IST
Last Updated 28 ಜೂನ್ 2023, 14:18 IST
ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಹೊಸ ಶಿಕ್ಷಣ ನೀತಿ-2020 ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಬಿ.ಶ್ರೀಪಾದಭಟ್, ಪ್ರಾಂಶುಪಾಲ ಡಾ.ರಾಮಚಂದ್ರ ಸದಾಶಿವಗೌಡ, ಪ್ರೊ.ನೀರಜಾದೇವಿ ಇದ್ದರು
ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಹೊಸ ಶಿಕ್ಷಣ ನೀತಿ-2020 ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಬಿ.ಶ್ರೀಪಾದಭಟ್, ಪ್ರಾಂಶುಪಾಲ ಡಾ.ರಾಮಚಂದ್ರ ಸದಾಶಿವಗೌಡ, ಪ್ರೊ.ನೀರಜಾದೇವಿ ಇದ್ದರು   

ದೊಡ್ಡಬಳ್ಳಾಪುರ: 34 ವರ್ಷಗಳ ನಂತರ ಜಾರಿಗೊಳಿಸಿರುವ ಹೊಸ ಶಿಕ್ಷಣ ನೀತಿಯು ನಮ್ಮನ್ನು ಹಿಮ್ಮುಖಗೊಳಿಸುವಂತೆ ಇದೆ. ಈ ಅರಿವು ಮತ್ತು ಎಚ್ಚರ ಇರದೇ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ ಎಂದು ಶಿಕ್ಷಣ ತಜ್ಞ ಬಿ.ಶ್ರೀಪಾದಭಟ್ ಹೇಳಿದರು.

ಅಂತರ್ ವಿಭಾಗೀಯ ಜ್ಞಾನ ವಿನಿಮಯ ಕಾರ್ಯಕ್ರಮದ ಭಾಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇತಿಹಾಸ ಮತ್ತು ಕನ್ನಡ ವಿಭಾಗ ಕಾಲೇಜಿನಲ್ಲಿ ಆಯೋಜಿಸಿದ್ದ ‘ಹೊಸ ಶಿಕ್ಷಣ ನೀತಿ-2020 ಸಾಧಕ ಬಾಧಕಗಳು’ ಕುರಿತ ಸಂವಾದದಲ್ಲಿ ಮಾತನಾಡಿದರು.

ಕೇವಲ ರಾಜಕೀಯ ವಿರೋಧದ ಮಾತಲ್ಲ, ಬದಲಾಗಿ ಈ ನೀತಿ ಅನುಷ್ಠಾನದಿಂದ ಯಾವ ರೀತಿಯ ವಾಸ್ತವ ಸಮಾಜ ಕಟ್ಟುತ್ತೇವೆ ಎಂಬುದರ ಬಗ್ಗೆಯೂ ಅವಲೋಕನ ನಡೆಯಬೇಕಿದೆ ಎಂದರು.

ADVERTISEMENT

ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ-2020 ಜಾರಿಗೊಳಿಸಲಾಗಿದೆ. ಆದರೆ ದೇಶದ ಇತರೆ ಯಾವುದೇ ರಾಜ್ಯಗಳಲ್ಲೂ ಜಾರಿಯಾಗದೇ ಇರುವ ಈ ಹೊಸ ನೀತಿ ನಮ್ಮ ರಾಜ್ಯದಲ್ಲಿ ಮಾತ್ರ ಏಕೆ ಜಾರಿಗೊಂಡಿದೆ ಎಂದು ಪ್ರಶ್ನಿಸಿದರು.

ಆಳುವ ಸರ್ಕಾರ ತನ್ನ ರಾಜಕೀಯ ಅಧಿಕಾರ ಬಳಸಿಕೊಂಡು ಏನೋ ತುರ್ತು ಎಂಬಂತೆ ಈ ನೀತಿಯನ್ನು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಒಟ್ಟಾರೆ ವ್ಯವಸ್ಥೆ ಮೇಲೆ ಹೇರಲಾಗಿದೆ. ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸಬೇಕು. ಆದರೆ ಈ ನೆಪದಲ್ಲಿ ಅವೈಜ್ಞಾನಿಕವಾದ ಮತ್ತು ವಾಸ್ತವದಲ್ಲಿ ಸಾಧ್ಯವಿಲ್ಲದ ಅಮೂರ್ತ ಕಲ್ಪನೆಗಳನ್ನು ತೇಲಿ ಬಿಡಬಾರದು. ಇದು ಒಂದು ರೀತಿಯಲ್ಲಿ ಕಣ್ಕಟ್ಟೆ ಆಗಿದೆ ಎಂದು ಟೀಕಿಸಿದರು.

ಹೊಸ ಶಿಕ್ಷಣ ನೀತಿ ಎಲ್ಲಾ ಜಾತಿಯ ಬಡವರು ಹಾಗೂ ದಲಿತ ಹಿಂದುಳಿದವರಿಗೆ ಶಿಕ್ಷಣ ಕೈಗೆಟುಕದಂತೆ ಮಾಡುತ್ತದೆ. ಕಸ್ತೂರಿ ರಂಗನ್ ಆಯೋಗದ ಮೇಲ್ಮುಕಿ ವಿಚಾರಗಳ ಚೂರ್ಣ ಇದಾಗಿದ್ದು, ಇದು ಚಾತುರ್ವರ್ಣ ವ್ಯವಸ್ಥೆಯ ಶಿಕ್ಷಣವನ್ನು ಎತ್ತಿ ಹಿಡಿಯುವುದೇ ಇದರ ತಾತ್ವಿಕತೆಯಾಗಿದೆ ಎಂದರು.

ಪ್ರಾಂಶುಪಾಲ ಡಾ.ರಾಮಚಂದ್ರ ಸದಾಶಿವಗೌಡ ಮಾತನಾಡಿ, ಯಾವುದೇ ನೀತಿ ತಂದರೂ ಅದು ಏರಿಕೆಯಾಗದೆ ವಿದ್ಯಾರ್ಥಿಗಳಲ್ಲಿ ಸ್ವತಂತ್ರ ಚಿಂತನೆ ಆಲೋಚನೆ ಹಾಗೂ ಜೀವನ ಗ್ರಹಿಕೆ ಹುಟ್ಟಿಸಬೇಕು ಎಂದು ಹೇಳಿದರು.

ಪ್ರೊ.ನೀರಜಾದೇವಿ, ಡಾ.ಗಂಗಾಧರ್, ಪ್ರೊ.ರಂಗಸ್ವಾಮಿ, ಪ್ರೊ.ಶೈಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.