ADVERTISEMENT

ವಿಧ್ವಂಸಕ ಕೃತ್ಯ ತಡೆಗೆ ಸಹಕಾರ ಅಗತ್ಯ: ಐಜಿಪಿ ಶರತ್ ಚಂದ್ರ

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿ ಮುಂಜಾಗ್ರತೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 13:57 IST
Last Updated 27 ಏಪ್ರಿಲ್ 2019, 13:57 IST
ಸಭೆಯಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು
ಸಭೆಯಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು   

ದೇವನಹಳ್ಳಿ: ‘ವಿಧ್ವಂಸಕ ಕೃತ್ಯ ತಡೆಗೆ ಸ್ಥಳೀಯರ ಸಹಕಾರ ಅತಿಮುಖ್ಯ’ ಎಂದು ಐಜಿಪಿ ಶರತ್ ಚಂದ್ರ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ, ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲು ಕೈಗೊಳ್ಳಬೇಕಾದ ಮುಂಜಾಗ್ರತೆಯ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಸಾರ್ವಜನಿಕ ಸ್ಥಳ, ಚರ್ಚ್, ಮಸೀದಿ, ದೇವಾಲಯಗಳು ದಾಳಿಗೆ ಪ್ರಮುಖ ಗುರಿಯಾಗಿರುವುದರಿಂದ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಪೊಲೀಸರ ಗಮನಕ್ಕೆ ತರಬೇಕು. ವಸತಿ ಸಮುಚ್ಛಯಕ್ಕೆ ಬಾಡಿಗೆಗೆ ಬರುವವರ ಪೂರ್ವಾಪರ ಮಾಹಿತಿ ತಿಳಿದುಕೊಳ್ಳಬೇಕು. ಕಚೇರಿ, ಬಡಾವಣೆಗಳಿಗೆ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಮೊದಲು ಸೂಕ್ತ ದಾಖಲೆಗಳನ್ನು ಪರಿಶೀಲಿಸಬೇಕು’ ಎಂದು ಅವರು ಹೇಳಿದರು.

ADVERTISEMENT

‘ಮನೆ, ಕಚೇರಿ, ವಾಣಿಜ್ಯ ಮಳಿಗೆ, ಮಾಲ್, ಚಿತ್ರಮಂದಿರ ಇರುವ ಕಡೆ ಕಡ್ಡಾಯವಾಗಿ ಸಿಸಿ ಕ್ಯಾಮೆರ ಅಳವಡಿಸಬೇಕು. ಹೋಟೆಲ್, ಲಾಡ್ಜ್, ಜುವೆಲರಿ ಮಳಿಗೆಗಳಲ್ಲಿ ಸಿ.ಸಿ ಕ್ಯಾಮೆರ ಕಡ್ಡಾಯ. ಅನೇಕ ಕಡೆ ಸಿ.ಸಿ ಕ್ಯಾಮೆರ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಮಾಲೀಕರು ಎಚ್ಚೆತ್ತು ದುರಸ್ತಿ ಮಾಡಿಸಬೇಕು. ಅಪರಿಚಿತರು ಯಾವುದೇ ಮಾಹಿತಿ ಕೇಳಿದರು ನೀಡಬಾರದು’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ನಿವಾಸ್ ಸಪೆಟ್ ಮಾತನಾಡಿ ‘ಮಾಲ್, ಹೋಟೆಲ್‌ಗಳ ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಬಳಸಬೇಕು. ಯಾವುದೇ ಸಾರ್ವಜನಿಕ ಸಭೆ ಸಮಾರಂಭ ಆಯೋಜಿಸುವ ಮೊದಲು ಪೊಲೀಸರಿಗೆ ಮಾಹಿತಿ ನೀಡಿ ಅನುಮತಿ ಪಡೆಯಬೇಕು. ಸ್ಥಳೀಯ ಪೊಲೀಸರ ಮತ್ತು ಠಾಣೆಯ ದೂರವಾಣಿ ಸಂಖ್ಯೆಯನ್ನು ಪಡೆದಿರಬೇಕು. ಅನುಮಾನಾಸ್ಪದ ವ್ಯಕ್ತಿ ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡುವವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ’ ಎಂದು ಹೇಳಿದರು.

ಹೊಸಕೋಟೆ ಡಿವೈಎಸ್‌ಪಿ ಸಕ್ರಿ, ಆನೇಕಲ್ ಡಿ.ವೈಎಸ್‌ಪಿ ನಂಜುಡೇಗೌಡ, ನೆಲಮಂಗಲ ಡಿವೈಎಸ್‌ಪಿ ಪಾಂಡುರಂಗ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.