ಆನೇಕಲ್: ‘ತಾಲ್ಲೂಕಿನ ಅತ್ತಿಬೆಲೆ ಸಮೀಪದ ಆಕ್ಸ್‌ಫರ್ಡ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯದೇ ಒಂದೇ ದಿನದಲ್ಲಿ 12-15 ಮಂದಿ ರೋಗಿಗಳು ಸಾವಿಗೀಡಾಗಿದ್ದಾರೆ’ ಎಂದು ರೋಗಿಗಳ ಸಂಬಂಧಿಕರು ಆರೋಪಿಸಿದ್ದಾರೆ.
‘ಆಸ್ಪತ್ರೆಯಲ್ಲಿ ಸುಮಾರು 200 ಮಂದಿ ದಾಖಲಾಗಿದ್ದಾರೆ. ಆದರೆ ನಾಲ್ಕು ಮಂದಿ ನರ್ಸ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ರೋಗಿಗಳ ಬಗ್ಗೆ ಕಾಳಜಿಯಿಲ್ಲ. ರೋಗಿಗಳಿಗೆ ಬೆಳಗ್ಗೆ ಕೆಲವು ಮಾತ್ರೆಗಳನ್ನು ನೀಡಿದರೆ ನಂತರ ರಾತ್ರಿಯವರೆಗೂ ಯಾವ ರೋಗಿಯ ಬಗ್ಗೆಯೂ ಗಮನಹರಿಸುವುದಿಲ್ಲ. ಸರ್ಕಾರದಿಂದ ಬರುವ ಹಣಕ್ಕಾಗಿ ಕೊರೊನಾ ಕೇಂದ್ರ ನಡೆಸುತ್ತಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ರೋಗಿಯ ಸಂಬಂಧಿಕರು ಒತ್ತಾಯಿಸಿದರು.
ರೋಗಿಗಳ ಸಂಬಂಧಿಕರ ದೂರುಗಳು ಹಿನ್ನೆಲೆಯಲ್ಲಿ ತಹಶೀಲ್ದಾರ್ ಪಿ.ದಿನೇಶ್ ಅವರು ಆಸ್ಪತ್ರೆಗೆ ನೋಟಿಸ್ ನೀಡಿದ್ದಾರೆ. ಈ ವಿಚಾರದಲ್ಲಿ ಕಳೆದ ಎರಡು ದಿನಗಳಿಂದ ಕೊರೊನಾದಿಂದ ಮೃತರಾಗಿರುವ 15 ಪ್ರಕರಣಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸುವಂತೆ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.
ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿದ್ದ ಅವರ ಆರೋಗ್ಯದ ಸ್ಥಿತಿ, ಆಸ್ಪತ್ರೆಯಲ್ಲಿ ನೀಡಲಾದ ವೈದ್ಯಕೀಯ ಚಿಕಿತ್ಸೆ, ಆಮ್ಲಜನಕ ಸೌಲಭ್ಯ, ಅವರಿಗೆ ಅಗತ್ಯವಾಗಿ ನೀಡಬೇಕಾಗಿದ್ದ ಔಷಧೋಪಚಾರವನ್ನು ನೀಡಲಾಗಿತ್ತೆ ಅಥವಾ ನಿರ್ಲಕ್ಷ್ಯ ವಹಿಸಲಾಗಿದೆಯೇ. ಪ್ರತಿ ವಾರ್ಡ್‌ಗಳಿಗೂ ನಿಯೋಜನೆಯಾಗಿರುವ ನರ್ಸ್‌ಗಳ ಸಂಖ್ಯೆ, ಶುಚಿತ್ವ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಮೂರುದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.