ADVERTISEMENT

ಬನ್ನೇರುಘಟ್ಟ ಆನೆ ಕುಟುಂಬಕ್ಕೆ ಮತ್ತೊಬ್ಬ ಅತಿಥಿ; ಗಂಡು ಮರಿಗೆ ಜನ್ಮನೀಡಿದ ‘ವೇದಾ’

​ಪ್ರಜಾವಾಣಿ ವಾರ್ತೆ
Published 28 ಜನವರಿ 2024, 1:00 IST
Last Updated 28 ಜನವರಿ 2024, 1:00 IST
ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ವೇದಾಳು ಗಂಡು ಮರಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮರಿ ಜೊತೆಯಲ್ಲಿರುವ ನೋಟ
ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ವೇದಾಳು ಗಂಡು ಮರಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮರಿ ಜೊತೆಯಲ್ಲಿರುವ ನೋಟ   

ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದ ಎಲ್ಲರ ಅಚ್ಚುಮೆಚ್ಚಿನ ಆನೆ ವೇದಾ ಶುಕ್ರವಾರ ಗಂಡು ಮರಿಗೆ ಜನ್ಮ ನೀಡಿದ್ದಾಳೆ. ಹೊಸ ಅತಿಥಿಯ ಆಗಮನ ಮತ್ತು ಮರಿ ಆನೆಯು ತುಂಟಾತ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಸಂತಸ ತಂದಿದೆ.

ಒಂದು ತಿಂಗಳಿನಲ್ಲಿ ಎರಡು ಮರಿಗಳು ಆನೆಗಳ ಕುಟುಂಬಕ್ಕೆ ಸೇರ್ಪಡೆಯಾಗಿವೆ. ನೂತನ ಅತಿಥಿಯ ಆಗಮನದಿಂದ ಬನ್ನೇರುಘಟ್ಟದ ಆನೆ ಕುಟುಂಬದ ಸಂಖ್ಯೆ 26ಕ್ಕೆ ಏರಿದೆ. 

ವೇದಾ ಜನ್ಮ ನೀಡುತ್ತಿರುವ ಐದನೇ ಮರಿ ಇದಾಗಿದೆ. ಚಂಪಾ, ಐರಾವತ, ಶ್ರುತಿ, ಐಹಿಲ್ಯ ಎಂಬ ನಾಲ್ಕು ಮರಿಗಳಿಗೆ ವೇದಾ ಜನ್ಮ ನೀಡಿದ್ದಾಳೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್‌ ತಿಳಿಸಿದರು.

ADVERTISEMENT

ಆನೆ ಮರಿ ಅಂದಾಜು 120 -130 ಕೆ.ಜಿಗೂ ಹೆಚ್ಚು ತೂಕವಿದ್ದು, ಆರೋಗ್ಯವಾಗಿದೆ. ಉದ್ಯಾನದ ಇತರ ಸಿಬ್ಬಂದಿಯೂ ತಾಯಿ ಮತ್ತು ಮರಿಯಾನೆಯನ್ನು ಅತ್ಯಂತ ಜತನದಿಂದ ನೋಡಿಕೊಳ್ಳುತ್ತಿದ್ದಾರೆ. ವೇದಾಳ ಮಾವುತ ಮಣಿಕಂಠ ಮತ್ತು ದ್ಯಾವಪ್ಪ ಆನೆ ಮತ್ತು ಮರಿಯ ಆರೈಕೆಯಲ್ಲಿ ತೊಡಗಿದ್ದಾರೆ. ತಾಯಿಗೆ ವಿಶೇಷ ಆರೈಕೆ ಮಾಡಲಾಗುತ್ತಿದೆ. ಉದ್ದು, ಅವಲಕ್ಕಿ, ಕಡಲೆಕಾಳು, ಹೆಸರಕಾಳು, ತೆಂಗಿನಕಾಯಿ ಸೇರಿದಂತೆ ವಿಶೇಷ ಆಹಾರವನ್ನು ನೀಡಲಾಗುತ್ತಿದೆ. 

ಮರಿಯು ತಾಯಿಯ ಹಾಲನ್ನೇ ಅವಲಂಬಿಸಿರುವುದರಿಂದ ತಾಯಿ ಹೆಚ್ಚು ಹಾಲು ನೀಡಲು ಅನುಕೂಲವಾಗುವಂತೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದು ಉದ್ಯಾನದ ಆನೆ ಮೇಲ್ವಿಚಾರಕ ಸುರೇಶ್‌ ತಿಳಿಸಿದರು.

ಮುದ್ದಾದ ಆನೆ ಮರಿಯನ್ನು ಜೋಪಾನದಿಂದ ನೋಡಿಕೊಳ್ಳುತ್ತಿರುವ ತಾಯಿ ವೇದಾ ಮತ್ತು ಅಕ್ಕ ಶೃತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.