ದೇವನಹಳ್ಳಿ:ಕಡಲೆಕಾಯಿ... ಕಡಲೆಕಾಯಿ... ಎಂದು ಕೂಗುತ್ತಾವ್ಯಾಪಾರಿಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದುದು ಒಂದೆಡೆಯಾದರೆ, ಮತ್ತೊಂದೆಡೆ ಆಂಜನೇಯಸ್ವಾಮಿಗೆ ವಿಶೇಷ ಹೂವಿನ ಅಲಂಕಾರದೊಂದಿಗೆ ಕಡಲೆಕಾಯಿ ಹಾಗೂ ಉದ್ದಿನವಡೆಯನ್ನು ನೈವೇದ್ಯವಾಗಿಟ್ಟು ಪೂಜೆ ಸಲ್ಲಿಸುತ್ತಿದ್ದ ದೃಶ್ಯಗಳು ಪಾರಿವಾಟ ಗುಟ್ಟದಲ್ಲಿ ಕಂಡುಬಂದವು.
ಕಡೇ ಕಾರ್ತೀಕ ಸೋಮವಾರದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಆಂಜನೇಯಸ್ವಾಮಿ ದೇವಾಲಯದಲ್ಲಿ 66ನೇ ವರ್ಷದ ಕಡಲೆಕಾಯಿ ಪರಿಷೆ ನಡೆಯಿತು.
ಆಂಜನೇಯ ಸ್ವಾಮಿಗೆ ಕಡಲೆಕಾಯಿ ಮತ್ತು ಉದ್ದಿನ ವಡೆಯ ಹಾರ ಹಾಕಿ ಗಂಧದ ಅಲಂಕಾರ ಮಾಡಲಾಗಿತ್ತು. ಸಹಸ್ರ ನಾಮಾರ್ಚನೆ ನಡೆಯಿತು. ಗವಿ ಬೀರಲಿಂಗೇಶ್ವರಸ್ವಾಮಿ ಮತ್ತು ಭಕ್ತ ಕನಕದಾಸರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕಡಲೆಕಾಯಿ ಪರಿಷೆ ಅಂಗವಾಗಿ ಕಾರ್ತೀಕ ಮಾಸದ ದೀಪ ದರ್ಶನ ನಡೆಯಿತು.
ಕೊರೊನಾ ಭೀತಿಯ ನಡುವೆಯೂ ಕಡಲೆಕಾಯಿ ಪರಿಷೆಯನ್ನು ಸರಳವಾಗಿ ಆಚರಿಸಲಾಯಿತು. ಅನೇಕ ಕಾರ್ಯಕ್ರಮಗಳನ್ನು ಪ್ರತಿವರ್ಷ ಜೈ ಮಾರುತಿ ಭಕ್ತಮಂಡಳಿ ಮಾಡಿಕೊಂಡು ಬರುತ್ತಿತ್ತು. ಈ ಬಾರಿ ಆಂಜನೇಯಸ್ವಾಮಿಗೆ ಪೂಜೆ, ಕಡಲೆಕಾಯಿ ಪ್ರಸಾದ ವಿತರಣೆಗೆ ಮಾತ್ರ ಸೀಮಿತವಾಗಿತ್ತು. ಮೋಡ ಕವಿದ ವಾತಾವರಣ ಹಾಗೂ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು.
ವ್ಯಾಪಾರಿಗಳು ಒಂದು ಕೆ.ಜಿ ಕಡಲೆಕಾಯಿಯನ್ನು ₹ 90ಗೆ ಮಾರಾಟ ಮಾಡಿದರು. ಉರಿದ ಕಡಲೆಕಾಯಿಯನ್ನು ಮೂರು ಸೇರಿಗೆ ₹ 100ರಂತೆ ಮಾರಾಟ ಮಾಡುತ್ತಿದ್ದರು.
ಸತತ ಮಳೆಯಿಂದಾಗಿ ಸರಿಯಾದ ಸಮಯಕ್ಕೆ ಕಡಲೆಕಾಯಿ ಇಳುವರಿ ಬಂದಿಲ್ಲ. ಪ್ರತಿವರ್ಷವೂ ಹೆಚ್ಚು ಕಡಲೆಕಾಯಿ ಅಂಗಡಿಗಳನ್ನು ಹಾಕುತ್ತಿದ್ದರು. ಈ ಬಾರಿ ಅಂಗಡಿಗಳ ಸಂಖ್ಯೆ ಕಡಿಮೆ ಇತ್ತು. ಮಳೆಯಿಂದ ಬೆಳೆ ನಷ್ಟ ಉಂಟಾಗಿದ್ದು, ಗಟ್ಟಿ ಕಡಲೆಕಾಯಿ ಹುಡುಕುವ ಪರಿಸ್ಥಿತಿ ಉಂಟಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.