ಬೆಂಗಳೂರು: ‘ತಣ್ಣನೆಯ ಗಾಳಿ. ಆಹ್ಲಾದಕರ ಪರಿಸರ. ಬಾಳೆ ಎಲೆಯಲ್ಲಿ 26 ಖಾದ್ಯಗಳು. ರುಚಿಯಾದ ತಿನಿಸಿನೊಂದಿಗೆ ಮನಸ್ಸಿಗೆ ಮುದ ನೀಡುವ ಸಂಗೀತ...’
-ಇದು ವೈಟ್‌ಫೀಲ್ಡ್‌ನಲ್ಲಿ ಇರುವ ದಿ ಡೆನ್ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆದ ಓಣಂ ‘ಸಧ್ಯ’ದಲ್ಲಿ ಕಂಡುಬಂದ ದೃಶ್ಯ.
ಕೇರಳದ ಸಾಂಪ್ರದಾಯಿಕ ಹಬ್ಬ ‘ಓಣಂ ಸಧ್ಯ’ದ ಅಂಗವಾಗಿ ಡೆನ್ ಹೋಟೆಲ್ ಗ್ರಾಹಕರಿಗೆ ವಿಶೇಷ ಔತಣ ಏರ್ಪಡಿಸಿತ್ತು. 26 ಬಗೆಯ ಖಾದ್ಯಗಳನ್ನು ಮುಖ್ಯ ಬಾಣಸಿಗ ವಿನೀತ್ ಜಯನ್ ಅವರ ನೇತೃತ್ವದ ತಂಡ ಊಣ ಬಡಿಸಿತು.
ಊಟದ ಹಾಲ್‌ನಲ್ಲಿ ವಿವಿಧ ಹೂಗಳಿಂದ ರಂಗೋಲಿ ಬಿಡಿಸಿ, ಬಾಳೆ ಎಲೆ ತೋರಣಗಳಿಂದ ಶೃಂಗರಿಸಲಾಗಿತ್ತು. ಹಬ್ವದ ವಾತಾವರಣದಲ್ಲಿ ಗ್ರಾಹಕರು ಓಣಂ ಊಟವನ್ನು ಸವಿದರು.
ಬಾಳೆಹಣ್ಣುಗಳನ್ನು ಬೆಲ್ಲದ ಪಾಕದಲ್ಲಿ ಅದ್ದಿ ಎಣ್ಣೆಯಲ್ಲಿ ಕರಿದು, ಏಲಕ್ಕಿ, ಜೀರಿಗೆ ಮತ್ತು ಒಣ ಶುಂಠಿಯೊಂದಿಗೆ ತಯಾರಿಸಲಾಗಿದ್ದ ಶರ್ಕರ ವರಟ್ಟಿ, ಶುಂಠಿ, ಹುಣಸೆ ಹಣ್ಣು ಮತ್ತು ಬೆಲ್ಲದಿಂದ ತಯಾರಿಸಲಾಗಿದ್ದ ಇಂಜಿ ಕರಿ, ಕಾಯಿ ತುರಿಯಿಂದ ಮಾಡಿದ್ದ ನುಗ್ಗೆಕಾಯಿ ಪಲ್ಯ, ಹಸಿ ಮಾವು ಮತ್ತು ತೆಂಗಿನ ಹಾಲಿನಿಂದ ತಯಾರಿಸಿದ್ದ ಮಾವಿನ ಕರಿ, ಮೊಸರಿನಿಂದ ತಯಾರಿಸಿದ್ದ ಬೀಟ್ರೂಟ್ ಪಚಡಿ, ಕಿಚಡಿ ಮೂಲಕ ಹಬ್ಬದ ಊಟ ಆರಂಭವಾಯಿತು.
ಸೋರೆಕಾಯಿ ಮತ್ತು ಕೆಂಪು ಬೀನ್ಸ್ ಹಾಕಿ ತೆಂಗಿನ ಹಾಲಿನೊಂದಿಗೆ ತಯಾರಿಸಿದ್ದ ಓಲನ್, 13 ತರಕಾರಿಗಳು ಹಾಕಿ, ತುರಿದ ತೆಂಗಿನಕಾಯಿಯನ್ನು ಬೆರೆಸಿ ಮಾಡಿದ ಮಿಶ್ರ ತರಕಾರಿ ಭಕ್ಷ್ಯ ಅವಿಲ್ (ಪಲ್ಯ), ಕುಂಬಳಕಾಯಿ, ತೋರನ್ ತಿನ್ನುತ್ತಿದ್ದವರ ಬಾಯಿಯಲ್ಲಿ ಆಹ್ಹಾ.. ಆಹಾ ಎನ್ನುವ ಉದ್ಘಾರ ಕೇಳಿಬಂತು.
ಓಣಂ ಭೋಜನದ ಅವಿಭಾಜ್ಯ ಪಾಕ ಚೋರ್ (ಕೆಂಪಕ್ಕಿ ಅನ್ನ). ಇದಕ್ಕೆ ಹೆಸರು ಬೆಳೆಯಿಂದ ತಯಾರಿಸಿದ್ದ ಪರಿಪ್ಪು ಕರ‍್ರಿ ಮತ್ತು ತುಪ್ಪು ಸೇರಿಸಿ ಬಡಿಸಲಾಯಿತು. ತೆಂಗಿನಕಾಯಿ ಮತ್ತು ಅಲಸಂದೆಯಿಂದ ಪಂಪಕಿನ್ ಎರಿಸ್ಸೆರಿ, ಇದಕ್ಕೆ ನೆಂಚಿಕೊಳ್ಳಲು ನೀಡಿದ್ದ ಮೊಸರಲ್ಲಿ ನೆನಸಿ ಎಣ್ಣೆಯಲ್ಲಿ ಕರೆದ ಮೆಣಸಿನಕಾಯಿ ಸವಿ ಮತ್ತೊಂದಿಷ್ಟು ತಿನ್ನುವ ಆಸೆ ಹೆಚ್ಚಿಸಿತು.
ಓಣಂ ಸಧ್ಯ ಅಡುಗೆ ಬಡಿಸುವುದು ಪೂರ್ಣವಾಗಬೇಕು ಎಂದರೆ ಕೊನೆಯಲ್ಲಿ ಪಾಯಸ ಬಡಿಸಲಾಗುತ್ತದೆ. ಹಾಲು, ಸಕ್ಕರೆ ಮತ್ತು ಬೆಲ್ಲ ಸೇರಿಸಿ ತಯಾರು ಮಾಡುವ ಪಾಯಸ ಶಾಂತಿ ಮತ್ತು ಸೌಹಾರ್ದದ ಸಂಕೇತವಾಗಿದೆ. ಇದು ಜೀರ್ಣಶಕ್ತಿಯಲ್ಲೂ ಕೂಡ ನೆರವಿಗೆ ಬರುತ್ತದೆ ಎಂದು ಹೇಳಲಾಗುತ್ತದೆ. ಪಾಲ್ ಪಾಯಸಂ, ಡ್ರೈ ಫ್ರೂಟ್ಸ್‌ನಿಂದ ತಯಾರಿಸಿದ ಪಾಲದ ಪ್ರಧಾನ ಮತ್ತು ಪಜಮ್ ಪ್ರಧಾನ ಸಿಹಿ ಓಣಂ ಸಧ್ಯದ ಊಟವನ್ನು ಪರಿಪೂರ್ಣಗೊಳಿಸಿತು.
ತಿಂದ ಆಹಾರ ಜೀರ್ಣ ಆಗುವಂತೆ ಮಜ್ಜಿಗೆ ಮತ್ತು ಔಷಧ ಗುಣವುಳ್ಳ ನೀರು (ಕರಿಂಗಾಳಿ ವಳ್ಳಂ) ನೀಡಲಾಯಿತು. ಹಬ್ಬದ ವಾತಾವರಣದಲ್ಲಿ ಹಬ್ಬದ ಊಟ ಸವಿದ ಗ್ರಾಹಕರು, ಇದೊಂದು ಮರೆಯಲಾಗದ ಔತಣ ಎಂದು ಮೆಚ್ಚುಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.