ADVERTISEMENT

ನಿತ್ಯ ಬವಣೆಗೆ ಸ್ಪಂದಿಸಿದವರು ಮಾತ್ರ ಸಾಹಿತಿಗಳು: ಸಾಹಿತಿ ಡಾ.ಎಲ್‌.ಹನುಮಂತಯ್ಯ  

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 5:17 IST
Last Updated 26 ಫೆಬ್ರುವರಿ 2024, 5:17 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿಯಲ್ಲಿ ಭಾನುವಾರ ಪ್ರಾರಂಭವಾದ 13ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಬಂಡಾಯ ಸಾಹಿತಿ ಡಾ.ಎಲ್‌.ಹನುಮಂತಯ್ಯ ಉದ್ಘಾಟಿಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿಯಲ್ಲಿ ಭಾನುವಾರ ಪ್ರಾರಂಭವಾದ 13ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಬಂಡಾಯ ಸಾಹಿತಿ ಡಾ.ಎಲ್‌.ಹನುಮಂತಯ್ಯ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ: ‘ಜನರ ಸಮಸ್ಯೆ, ದಿನ ನಿತ್ಯದ ಬದುಕಿನ ಬವಣೆಗಳ ಕುರಿತು ಬರೆಯದವರನ್ನು ಸಾಹಿತಿಗಳೆಂದು ಕರೆಯಲು ಹೇಗೆ ಸಾಧ್ಯ’ ಎಂದು ಹಿರಿಯ ಬಂಡಾಯ ಸಾಹಿತಿ ಡಾ.ಎಲ್‌.ಹನುಮಂತಯ್ಯ ಪ್ರಶ್ನಿಸಿದರು.

ತಾಲ್ಲೂಕಿನ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಸುವರ್ಣ ಸಂಭ್ರಮ ವೇದಿಕೆಯಲ್ಲಿ ಪ್ರಾರಂಭವಾದ 13ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

‘ಗ್ರಾಮೀಣ ಭಾಗದ ಜನರ ಬದುಕು ಸೇರಿದಂತೆ ಎಲ್ಲ ಕ್ಷೇತ್ರದವರು ತಮ್ಮ ಅನುಭವ ಬರೆಯಬೇಕು. ಆಗ ಮಾತ್ರ ಕನ್ನಡ ಸಾಹಿತ್ಯ ಸಮೃದ್ಧವಾಗಲಿದೆ. ಸಾಹಿತ್ಯ ಎನ್ನುವುದು ಎಲ್ಲರ ಸ್ವತ್ತು. ಅದು ಕೇವಲ ವಿದ್ಯಾವಂತರಿಗೆ ಮಾತ್ರ ಸೀಮಿತವಾಗಿಲ್ಲ. ಇಂದಿಗೂ ಜನಪದ ಸಾಹಿತ್ಯ ವಿಶ್ವ ಸಾಹಿತ್ಯ ವೇದಿಕೆಗಳಲ್ಲಿ ನಿಲ್ಲುವ ಅರ್ಹತೆ ಹೊಂದಿದೆ’ ಎಂದರು.

ADVERTISEMENT

‘12ನೇ ಶತಮಾನದಲ್ಲೇ ವಚನಕಾರರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯಗಳನ್ನು ವಿಶ್ವಕ್ಕೆ ನೀಡಿದ್ದರು. ಯಾರೂ ಸಹ ಹುಟ್ಟಿನ ಕಾರಣಕ್ಕಾಗಿಯೇ ದೊಡ್ಡವರಾಗಲು ಸಾಧ್ಯವಿಲ್ಲ. ಅವರು ಬದುಕುವ ರೀತಿಯಿಂದ ಮಾತ್ರ ದೊಡ್ಡವರಾಗಲಿದ್ದಾರೆ. ಇದನ್ನೇ ಆದಿಕವಿ ಪಂಪನಿಂದ ಕುವೆಂಪುವರೆಗೂ ಹೇಳಿದ್ದಾರೆ. ಕಲೆ, ಸಾಹಿತ್ಯ ಆರಾಧನೆಯ ವಸ್ತುಗಳಲ್ಲ. ಅವುವುಗಳಲ್ಲಿನ ಮೌಲ್ಯಗಳನ್ನು ಪಾಲಿಸುವಂತಾಗಬೇಕು. ಇಲ್ಲವಾದರೆ ಅನಾಹುತಗಳಾಗಲಿವೆ’ ಎಂದರು.

‘ಸಾಹಿತ್ಯ ಬರೆಯುವುದಷ್ಟೇ ನನ್ನ ಕೆಲಸ. ಪಾಲಿಸುವುದು ಓದುಗರ ಕೆಲಸ ಎನ್ನುವ ಮನೋಭಾವನೆ ಯಾವ ಬರಹಗಾರರಿಗೂ ಶೋಭೆ ತರುವಂಥದ್ದಲ್ಲ’ ಎಂದರು.

ಸಮ್ಮೇಳನ ಅಧ್ಯಕ್ಷ ಡಾ.ಟಿ.ಎಚ್‌.ಆಂಜಿನಪ್ಪ ಮಾತನಾಡಿ, ‘ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿಯೇ ವ್ಯಾಸಂಗ ಮಾಡಿ ವೈದ್ಯ ವೃತ್ತಿಯಲ್ಲಿ ಸಾಧನೆ ಮಾಡಲು ಸಾಧ್ಯವಿದೆ ಎನ್ನುವುದನ್ನು ಸಾಬೀತು ಮಾಡಿದ್ದೇನೆ ಎನ್ನುವ ತೃಪ್ತಿ ನನಗಿದೆ. ಕನ್ನಡ ಸರ್ಕಾರಿ ಶಾಲೆ ಎನ್ನುವ ಕೀಳರಿಮೆ ಬದಿಗಿಟ್ಟು ಕಲಿಕೆಯ ಕಡೆಗಷ್ಟೇ ಆದ್ಯತೆ ನೀಡಬೇಕು. ಪರಿಶ್ರಮ ಇದ್ದರೆ ಮಾತ್ರ ಉನ್ನತ ಸಾಧನೆ, ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ’ ಎಂದರು.

‘ದೊಡ್ಡಬಳ್ಳಾಪುರ ನಗರ ಶಿಲಾಯುಗ ಸಂಸ್ಕೃತಿಯನ್ನು ಹಾಗೂ ಪ್ರಾಗೈತಿಹಾಸಿಕ ಚರಿತ್ರೆಯನ್ನು ತನ್ನೊಡಲಲ್ಲಿಟ್ಟುಕೊಂಡು ಉಸಿರಾಡುತ್ತಿದೆ. ಗಂಗರು, ನೊಳಂಬರು, ರಾಷ್ಟ್ರಕೂಟರು, ಚೋಳರು, ಹೊಯ್ಸಳರು, ವಿಜಯನಗರ ಸಾಮ್ರಾಟರು, ದೊಡ್ಡಬಳ್ಳಾಪುರದ ಪಾಳೆಯಗಾರರು, ಮೊಘಲರು, ಹುಲುಕಡಿ ನಾಡಪ್ರಭುಗಳು ಆಡಳಿತ ನಡೆಸಿರುವ ಸ್ಥಳ ಇದಾಗಿದೆ’ ಎಂದರು.

‘ಬಾಶೆಟ್ಟಿಹಳ್ಳಿ ಮತ್ತು ಇಲ್ಲಿನ ಕೈಗಾರಿಕಾ ಪ್ರದೇಶ ದೊಡ್ಡಬಳ್ಳಾಪುರದ ಹೃದಯ ಭಾಗವಾಗಿದೆ. ತಾಲ್ಲೂಕಿನ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಆದರೆ ಉತ್ತರ ಭಾರತದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇವರ ಸಂಖ್ಯೆ ಅನಿಯಂತ್ರಿತವಾಗಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದರು.

‘ಇಲ್ಲಿಯ ರೈತರು ತಮ್ಮ ಜಮೀನು, ಹೊಲಗದ್ದೆ, ಮನೆ, ತೋಟಗಳನ್ನು ನೀಡಿ ತಮ್ಮ ನೆಲ-ಜಲವನ್ನು ಕಳೆದುಕೊಳ್ಳುತ್ತಿದ್ದಾರೆ. ಸ್ಥಳೀಯ ಯುವಜನತೆ ಹೊಲ-ನೆಲ ಕಳೆದುಕೊಂಡು ನಿರುದ್ಯೋಗಿಗಳಾಗುತ್ತಿದ್ದಾರೆ. ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ಊರೆಲ್ಲ ಅಲೆಯುವಂತಾಗಿದೆ. ಇದು ತಪ್ಪಬೇಕು. ಈ ದಿಸೆಯಲ್ಲಿ ಸರ್ಕಾರ ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ಗಂಭೀರವಾಗಿ ಯೋಚಿಸಿ ಕಾರ್ಯೋನ್ಮುಖರಾಗಬೇಕು’ ಎಂದರು.

‘ಬಾಶೆಟ್ಟಿಹಳ್ಳಿ ಕಾರ್ಖಾನೆಗಳ ಕಲುಷಿತ ನೀರು ಸುತ್ತಮುತ್ತಲಿನ ನಾಗರಿಕರು ಮತ್ತು ರಾಸುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಬಗ್ಗೆ ಸತತವಾಗಿ ಅರ್ಕಾವತಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಯುತ್ತಲೇ ಇವೆ. ಕ್ಯಾನ್ಸರ್ ಮತ್ತು ಇತರ ಸಾಂಕ್ರಾಮಿಕ ರೋಗಗಳಿಂದ ಬಚಾವಾಗಲು ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲಿ ಸಂಸ್ಕರಿಸಬೇಕು. ದೊಡ್ಡಬಳ್ಳಾಪುರ ನಗರಸಭೆಯೂ ಕೂಡ ಇದರ ಬಗ್ಗೆ ಎಚ್ಚರಿಕೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದರು.

‘ವೈದ್ಯಕೀಯ ಪದಕೋಶ ನಿಘಂಟು ಗ್ರಂಥದ ಮೂಲಕ ಆಂಗ್ಲ ವೈದ್ಯಕೀಯ ಪದಗಳನ್ನು ಕನ್ನಡಕ್ಕೆ ಭಾಷಾಂತರಿಸಿದ ಡಾ.ಕೆ.ಸಿ.ಶಿವಪ್ಪ, ವೈದ್ಯರೂ ಆದ ಡಾ.ಅನುಪಮ ನಿರಂಜನ, ಖ್ಯಾತ ವಿಮರ್ಶಕ ಡಿ.ಆರ್‌.ನಾಗರಾಜ್‌ ಸೇರಿದಂತೆ ಅನೇಕ ಮಹಾನ್‌ ಬರಹಗಾರರು ನಮ್ಮ ತಾಲ್ಲೂಕಿನವರು ಎನ್ನುವುದು ಹೆಮ್ಮೆಯ ಸಂಗತಿ’ ಎಂದರು.

ಸಮ್ಮೇಳನ ಉದ್ಘಾಟನೆಗೂ ಮುನ್ನ ಜವಾಹರ್‌ ನವೋದಯ ವಿದ್ಯಾಲಯ ಬಳಿಯಿಂದ ವೇದಿಕೆವರೆಗೆ ವಿವಿಧ ಸಾಂಸ್ಕೃತಿಕ ಕಲಾ ತಂಡಗೊಂದಿಗೆ ಸಮ್ಮೇಳನ ಅಧ್ಯಕ್ಷರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಪುಸ್ತಕ ಮಳಿಗೆ, ಚಿತ್ರಕಲಾ ಪ್ರದರ್ಶನ ಸೇರಿದಂತೆ ವಿವಿಧ ಮಳಿಗೆಗಳನ್ನು ತೆರೆಯಲಾಗಿತ್ತು.

ಶಾಸಕ ಧೀರಜ್‌ ಮುನಿರಾಜ್, ತಹಶೀಲ್ದಾರ್‌ ವಿಭಾವಿದ್ಯಾರಾಥೋಡ್‌, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಬಿ.ಕೃಷ್ಣಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಗೋವಿಂದರಾಜ್‌, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನರಸಿಂಹಮೂರ್ತಿ, ಪ್ರೇಮ್‌ಕುಮಾರ್‌, ಬಿ.ಕೃಷ್ಣಪ್ಪ, ಮುನಿರಾಜಪ್ಪ, ಮುನಿನಾರಾಯಣಪ್ಪ, ಬಿ.ಎಚ್‌.ಕೆಂಪಣ್ಣ, ಕೆ.ಬಿ.ಮುದ್ದಪ್ಪ, ಸದಾಶಿವ ರಾಮಚಂದ್ರಗೌಡ, ನಾರಾಯಣಸ್ವಾಮಿ, ವಿವಿಧ ಕನ್ನಡಪರ ಸಂಘಟನೆ, ಕಾರ್ಮಿಕ ಸಂಘಟನೆ, ರೈತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿಯಲ್ಲಿ ಭಾನುವಾರ ಪ್ರಾರಂಭವಾದ 13ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಖ್ಯಾತ ವೈದ್ಯ ಡಾ.ಸಿ.ಆರ್‌.ಚಂದ್ರಶೇಖರ್‌ ಅವರನ್ನು ಅಭಿನಂದಿಸಲಾಯಿತು
ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿಯಲ್ಲಿ ಭಾನುವಾರ ಪ್ರಾರಂಭವಾದ 13ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಚಿತ್ರಕಲಾ ಪ್ರದರ್ಶನ ವೀಕ್ಷಣೆ ಮಾಡಿದ ಪ್ರೇಕ್ಷಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.