ಆನೇಕಲ್ (ಬೆಂಗಳೂರು ಗ್ರಾಮಾಂತರ ಜಿಲ್ಲೆ): ಎರಡು ದಿನ ನೂರಾರು ಸಂಗೀತ ಪ್ರಿಯರಿಗೆ ಸಂಗೀತದ ರಸದೌತಣ ಉಣ ಬಡಿಸಿದ ರಾಜ್ಯ ಮಟ್ಟದ 18ನೇ ಸುಗಮ ಸಂಗೀತ ಸಮ್ಮೇಳನಕ್ಕೆ ಭಾನುವಾರ ವೈಭವದ ತೆರೆ ಬಿದ್ದಿತು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಹಮ್ಮಿಕೊಂಡಿದ್ದ ಸಮ್ಮೇಳನದಲ್ಲಿ ನೂರಕ್ಕೂ ಹೆಚ್ಚು ಗಾಯಕರು ಮತ್ತು 30ಕ್ಕೂ ಹೆಚ್ಚು ಕವಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ನೆರೆದಿದ್ದ ನೂರಾರು ಪ್ರೇಕ್ಷಕರು ಗಾನ ಲೋಕದಲ್ಲಿ ತೇಲಿದರು.
‘ಕವಿಯ ನೋಡಿ ಕವಿತೆ ಕೇಳಿ’ ಕಾರ್ಯಕ್ರಮದಲ್ಲಿ ಹಿರಿಯ ಕವಿಗಳಾದ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣರಾವ್, ಎಂ.ಆರ್.ಕಮಲಾ, ನಾ.ದಾಮೋದರ್ ಶೆಟ್ಟಿ, ದುಂಡಿರಾಜ್, ಹೇಮಾ ಪಟ್ಟಣಶೆಟ್ಟಿ, ಕಾ.ವೆಂ.ಶ್ರೀನಿವಾಸಮೂರ್ತಿ, ರಂಜಿನಿ ಪ್ರಭು ಅವರು ಕವನ ವಾಚಿಸಿದರು.
ಗಾಯಕರಾದ ರಾಘವೇಂದ್ರ ಬಿಜಾಡಿ, ನಗರ ಶ್ರೀನಿವಾಸ ಉಡುಪ, ಪ್ರದೀಪ್, ಸೀಮಾ ರಾಯ್ಕರ್, ಪ್ರೇಮಲತಾ ದಿವಾಕರ್, ಡಾ.ಕಿಕ್ಕೇರಿ ಕೃಷ್ಣಮೂರ್ತಿ, ನಾಗಚಂದ್ರಿಕಾ ಭಟ್, ನಿತಿನ್ ರಾಜಾರಾಮ್ ಶಾಸ್ತ್ರಿ, ಪಂಚಮ್ ಹಳಿಬಂಡಿ ಅವರು ಈ ಕವನಗಳಿಗೆ ದನಿಯಾದರು. ಕವಿ ಮತ್ತು ಗಾಯಕರ ಜುಗಲ್ ಬಂದಿ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಿತು.
ಛೆಂದ-ಚಂದ ಕಾರ್ಯಕ್ರಮದಲ್ಲಿ ಕಾವ್ಯ, ತ್ರಿಪದಿ, ಚೌಪದಿ, ರಗಳೆಗಳ ವಿಚಾರ ಪ್ರಸ್ತಾಪ ಮತ್ತು ವಿಚಾರ ಮಂಥನ ನಡೆಯಿತು. ನಿತ್ಯ ನೂತನ ಕಾರ್ಯಕ್ರಮದಲ್ಲಿ ಕಲಾವಿದ ಶ್ರೀನಿವಾಸ ಪ್ರಭು ಅವರು ಕುವೆಂಪು, ಬೇಂದ್ರೆ, ಪುತಿನ, ಕೆ.ಎಸ್.ನರಸಿಂಹಸ್ವಾಮಿ ಮತ್ತು ಗೋಪಾಲಕೃಷ್ಣ ಅಡಿಗ ಅವರ ಕವನಗಳನ್ನು
ವಾಚಿಸಿದರು.
ಉಷಾ, ಮಂಡ್ಯ ರಮ್ಯ, ರಾಜರಾಮ್, ಶಿವಶಂಕರ್, ಶಶಿಕಲಾ, ಪೂರ್ಣಿಮಾ, ನಿತಿನ್ ರಾಜಾರಾಮ್ ಶಾಸ್ತ್ರಿ ಮತ್ತು ಡೇವಿಡ್ ಮುಂತಾದ ಕಲಾವಿದರು ಚಿತ್ರಗೀತೆಗಳಾದ ಕವನಗಳನ್ನು ಹಾಡಿ
ಮನರಂಜಿಸಿದರು.
ಸಮ್ಮೇಳನಾಧ್ಯಕ್ಷ ಎನ್.ಎಸ್.ಪ್ರಸಾದ್ ಸಂಯೋಜನೆ ಮಾಡಿದ ಮ್ಯಾಂಡೋಲಿನ್ ವಾದನ ಎಲ್ಲರ ಮನ ಸೆಳೆಯಿತು. ನೆರೆದಿದ್ದ ಪ್ರೇಕ್ಷಕರು ಮಂತ್ರಮುಗ್ಧರಾದರು. ಹರೀಶ್ ನಾಗರಾಜು ನಿರೂಪಿಸಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ, ಗಾಯಕರಾದ ಡಾ.ಮುದ್ದುಮೋಹನ್, ಕಾರ್ಯಕಾರಿ ಮಂಡಳಿಯ ನಗರ ಶ್ರೀನಿವಾಸ ಉಡುಪ, ಕೆ.ಶಿವಣ್ಣ, ಪಿ.ಧನಂಜಯ, ಸಾಯಿಪ್ರಕಾಶ್, ವೀರಭದ್ರಪ್ಪ, ಟಿ.ವಿ.ಉಮೇಶ್, ಎಚ್.ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.