ADVERTISEMENT

ಪಾಕ್‌ ಕುಟುಂಬ ಬಂಧನ: ತನಿಖೆ ಚುರುಕು

ಜಿಗಣಿಗೆ ಹಿರಿಯ ಪೊಲೀಸ್‌ ಅಧಿಕಾರಿಗಳ ಭೇಟಿ * ಪ್ರಕರರಣದ ಮಾಹಿತಿ ಪಡೆದ ಐಡಿಜಿಪಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 23:53 IST
Last Updated 1 ಅಕ್ಟೋಬರ್ 2024, 23:53 IST
ಆನೇಕಲ್ ತಾಲ್ಲೂಕಿನ ಜಿಗಣಿ ಪೊಲೀಸ್‌ ಠಾಣೆಗೆ ಎಡಿಜಿಪಿ ಹಿತೇಂದ್ರ ಅವರು ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು
ಆನೇಕಲ್ ತಾಲ್ಲೂಕಿನ ಜಿಗಣಿ ಪೊಲೀಸ್‌ ಠಾಣೆಗೆ ಎಡಿಜಿಪಿ ಹಿತೇಂದ್ರ ಅವರು ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು   

ಆನೇಕಲ್: ಪಾಕಿಸ್ತಾನದ ಕುಟುಂಬದ ನಾಲ್ವರು ಹೆಸರು ಬದಲಾಯಿಸಿಕೊಂಡು ಆರು ವರ್ಷಗಳಿಂದ ಜಿಗಣಿಯಲ್ಲಿ ನೆಲೆಸಿದ್ದ ಪ್ರಕರಣವನ್ನು ಕೇಂದ್ರ ಗುಪ್ತಚರ ವಿಭಾಗ, ಕೇಂದ್ರ ತನಿಖಾ ಸಂಸ್ಥೆ ಎನ್‌ಐಎ ಗಂಭೀರವಾಗಿ ಪರಿಗಣಿಸಿದ್ದು, ವಿವಿಧ ಆಯಾಮಗಳಲ್ಲಿ ನಡೆಯುತ್ತಿರುವ ತನಿಖೆಯನ್ನು ಚುರುಕುಗೊಳಿಸಲಾಗಿದೆ. 

ಈ ನಡುವೆ ಆನೇಕಲ್‌ ಉಪ ವಿಭಾಗದ ಪೊಲೀಸರು ಕೂಡ ಬಂಧಿತರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅ.9ರವರೆಗೆ ಪೊಲೀಸ್‌ ವಶಕ್ಕೆ ನೀಡಲಾಗಿದೆ.   

ಜಿಗಣಿಗೆ ಮಂಗಳವಾರ ಭೇಟಿ ನೀಡಿದ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಆರ್‌.ಹಿತೇಂದ್ರ ಮತ್ತು ಕೇಂದ್ರ ವಲಯ ಐಜಿಪಿ ಲಾಭೂರಾಮ ಅವರು ಪ್ರಕರಣದ ಬಗ್ಗೆ ತನಿಖಾ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ADVERTISEMENT

ಆರೋಪಿಗಳು ಭಾರತದ ಪಾಸ್‌ಪೋರ್ಟ್‌, ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌ ಹೇಗೆ ಪಡೆದರು ಮತ್ತು ಅವರಿಗೆ ನೆರವು ನೀಡಿದವರು ಯಾರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತನಿಖೆ ವೇಳೆ ಆರೋಪಿಗಳು ನೀಡಿರುವ ಮಾಹಿತಿಯ ಸತ್ಯಾಸತ್ಯ ಪರಿಶೀಲಿಸಲಾಗುತ್ತಿದೆ ಎಂದು ಹಿತೇಂದ್ರ ಸುದ್ದಿಗಾರರಿಗೆ ತಿಳಿಸಿದರು.

ಆರೋಪಿಗಳ ಮನೆಯಲ್ಲಿ ವಶಕ್ಕೆ ಪಡೆದ ಲ್ಯಾಪ್‌ಟಾಪ್‌, ಮೊಬೈಲ್‌, ಜೆರಾಕ್ಸ್‌ ಪ್ರತಿಗಳು ಸೇರಿದಂತೆ ಹಲವಾರು ದಾಖಲೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳಿಸಲಾಗಿದೆ. ವರದಿ ಬಂದ ನಂತರ ಆರೋಪಿಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ಅವರು ಹೇಳಿದರು.

ಎಸ್‌.ಪಿ ಸಿ.ಕೆ.ಬಾಬಾ, ಎಎಸ್‌ಪಿ ನಾಗರಾಜು, ಡಿವೈಎಸ್ಪಿ ಮೋಹನ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌ ಹಾಜರಿದ್ದರು.

ಪಾಕ್‌ ಪ್ರಜೆಯಿಂದ ವಶಪಡಿಸಿಕೊಂಡಿರುವ ಪಾಸ್‌ಪೋರ್ಟ್‌

ಬಿರಿಯಾನಿ ಹೋಟೆಲ್‌ ಅಕ್ರಮವಾಗಿ ನುಸುಳಿದ್ದ ಪಾಕಿಸ್ತಾನದ ಪ್ರಜೆಗಳು ಜಿಗಣಿಯಲ್ಲಿ ಬಿರಿಯಾನಿ ಹೋಟೆಲ್‌ ನಡೆಸುತ್ತಿದ್ದರು. ಧರ್ಮ ಪ್ರಚಾರಕ್ಕೆ ಹಣ ಪಡೆಯುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.