ADVERTISEMENT

ಪಾಕ್‌ ಪರ ಘೋಷಣೆ ಸಹಿಸಲ್ಲ: ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 6:33 IST
Last Updated 2 ಮಾರ್ಚ್ 2024, 6:33 IST
ವಿ.ಎಸ್.ಉಗ್ರಪ್ಪ ಕಾಂಗ್ರೆಸ್ ಮುಖಂಡ.
ವಿ.ಎಸ್.ಉಗ್ರಪ್ಪ ಕಾಂಗ್ರೆಸ್ ಮುಖಂಡ.   

ವಿಜಯಪುರ(ದೇವನಹಳ್ಳಿ): ಪಾಕಿಸ್ತಾನ ಪರ ಘೋಷಣೆ ಕೂಗುವಂತಹ ದೇಶದ್ರೋಹಿ ಕೆಲಸವನ್ನು ಕಾಂಗ್ರೆಸ್ ಎಂದಿಗೂ ಮಾಡಿಲ್ಲ. ಮುಂದೆ ಮಾಡುವುದೂ ಇಲ್ಲ. ಇಂತಹದನ್ನು ಸಹಿಸುವುದೂ ಇಲ್ಲ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್ ಉಗ್ರಪ್ಪ ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ದೇಶ ಉಳಿಸುವಲ್ಲಿ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವಲ್ಲಿ ಹೋರಾಟ ಮಾಡಿಕೊಂಡು ಬಂದಿದೆ. ಶತ್ರುರಾಷ್ಟ್ರ ಪರ ಘೋಷಣೆಯನ್ನು ಸಹಿಸುವುದಿಲ್ಲ. ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಸಿ, ತಪ‍್ಪಿತಸ್ಥರಿಗೆ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆಗೆ ಒಳಪಡಿಸುವ ಕೆಲಸ ಸರ್ಕಾರ ಮಾಡಲಿದೆ ಎಂದು ತಿಳಿಸಿದರು.

ಈ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟರೇ ಸಹಿಸುವುದಿಲ್ಲ. 2019ರಲ್ಲಿ ಪುಲ್ವಾಮಾ ಘಟನೆ ನಡೆದಿದ್ದೆ ಬೇರೆ, ಬಿಂಬಿಸಿದ್ದೆ ಬೇರೆ, ರಾಜಕೀಯ ಲಾಭಕ್ಕೆ ಬಳಕೆ ಮಾಡಿಕೊಂಡರು ಎಂದರು.

ADVERTISEMENT

ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಡಲು ಕಾಂಗ್ರೆಸ್‌ ಶ್ರಮಿಸಿದೆ. ಆರ್‌ಎಸ್‌ಎಸ್‌ನವರು ಬ್ರಿಟಿಷರ ಪರವಾಗಿದ್ದವರು. ಅದರ ಪಕ್ಷ ಬಿಜೆಪಿ ಈಗಲೂ ಮನುಧರ್ಮ ಶಾಸ್ತ್ರದ ಪರವಾಗಿದೆ. ಸಂವಿಧಾನದ ಅನುಗುಣವಾಗಿ ಆಡಳಿತ ನೀಡುತ್ತಿರುವ ಕಾಂಗ್ರೆಸ್‌ ಆರು ದಶಕಗಳ ಕಾಲ ಎಲ್ಲಾ ಸಮಾಜವನ್ನು ಒಟ್ಟಿಗೆ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ ಎಂದು ಹೇಳಿದರು.

‘ದೇಶದಲ್ಲಿ ಬಿಜೆಪಿಯ ವಿರುದ್ಧದ ಅಲೆಯಿದೆ. ಅಯೋಧ್ಯೆ ರಾಮಮಂದಿರ ಮುಂದಿಟ್ಟುಕೊಂಡು ಮತ ಕೇಳಲು ಹೋಗುತ್ತಿದ್ದಾರೆ. ಜನರು ಬುದ್ಧಿವಂತರಿದ್ದಾರೆ. ಚುನಾವಣೆ ಸಮಯದಲ್ಲಿ ಬಿಜೆಪಿಯವರು ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಮತ ಕೇಳುತ್ತಾರೆ ಎನ್ನುವುದನ್ನು ಅರಿತು ಇಂಡಿಯಾ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಲಿದ್ದಾರೆ. ನಾವು ರಾಷ್ಟ್ರಧ್ವಜದ ಮೇಲೆ ನಂಬಿಕೆ ಇಟ್ಟಿದ್ದೇವೆ. ಬಿಜೆಪಿಯವರು ಭಗವಧ್ವಜದ ಮೇಲೆ ನಂಬಿಕೆ ಇಟ್ಟಿದ್ದಾರೆ’ ಎಂದು ತಿಳಿಸಿದರು.

ಬಳ್ಳಾರಿಯಲ್ಲಿ ಸ್ಪರ್ಧೆ: ಉಗ್ರಪ್ಪ
‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯಿಂದಲೇ ಸ್ಪರ್ಧಿಸಲು ನಡೆಸಿದ್ದೇವೆ’ ಎಂದು ಕಾಂಗ್ರೆಸ್‌ ಮುಖಂಡ ಉಗ್ರಪ್ಪ ಹೇಳಿದರು. ‘ಅಲ್ಲಿನ ಸಮಸ್ಯೆ ನಿವಾರಣೆ ಮಾಡಲು ಶ್ರಮಿಸುತ್ತಿದ್ದೇನೆ. ಕಳೆದ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಸೋತಿದ್ದೇನೆ. ಈ ಬಾರಿ ಸ್ಪರ್ಧಿಸಿ ಗೆಲುವು ಸಾಧಿಸುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.