ದೇವನಹಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ತಿದ್ದುಪಡಿ ಕಾಯ್ದೆ ರದ್ದುಕೋರಿ ದಲಿತ ಸಂಘರ್ಷ ಸಮಿತಿ ಸಂಯುಕ್ತ ಪರೇಡ್ ನಡೆಸಲಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ತಿಮ್ಮರಾಯಪ್ಪ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಪರೇಡ್ ಕುರಿತು ಮಾಹಿತಿ ನೀಡಿದ ಅವರು ರೈತರ ಭೂಮಿ, ಬೆಳೆ, ವಾಸಸ್ಥಳ ಕಬಳಿಸಲು ಬಂಡವಾಳಶಾಹಿ ಕಾರ್ಪೋರೆಟ್ ಕಂಪನಿಗಳು ಹಾತೊರೆಯುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿ ಹಾಗೂ ಜನವಿರೋಧಿ ಕಾಯ್ದೆ ಜಾರಿಗೆ ತರುವ ಮೂಲಕ ಜನರ ಮರಣ ಶಾಸನಕ್ಕೆ ಸಹಿ ಮಾಡಿದೆ ಎಂದು ಆರೋಪಿಸಿದರು.
ಜ.26ರಂದು ಫ್ರೀಡಂ ಪಾರ್ಕ್‍ನಲ್ಲಿ ಜನಾಂದೋಲನ ಸಂಯುಕ್ತ ಪರೇಡ್‍ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಪ್ರಧಾನ ಸಂಚಾಲಕ ಅತ್ತಿಬೆಲೆ ನರಸಪ್ಪ ಮಾತನಾಡಿ, ಹಳ್ಳಿಗಳ ದೇಶವಾಗಿರುವ ಭಾರತದಲ್ಲಿ ಕಾಯ್ದೆ ಜಾರಿಯಾದರೆ ಗ್ರಾಮೀಣ ಕೃಷಿ ಚಟುವಟಿಕೆ ಅಪೋಶನವಾಗಲಿದೆ. ಜಮೀನು ಮಾಲೀಕ ಕೂಲಿ ಕಾರ್ಮಿಕನಾಗಿ ಬಿಡಿಗಾಸಿಗೆ ಕೈಚಾಚಬೇಕಾದ ಪರಿಸ್ಥಿತಿ ಎದುರಾಗಲಿದೆ. ಅನ್ನದಾತರು ಅನಾಥರಾಗಲಿದ್ದಾರೆ. ಸಂವಿಧಾನದ ಹಕ್ಕು ಶೂನ್ಯವಾಗಲಿದೆ ಎಂದು ದೂರಿದರು.
ಟ್ರ್ಯಾಕ್ಟರ್, ಎತ್ತಿನಬಂಡಿ, ಟೆಂಪೊ, ಜೀಪು, ಕಾರು, ಬೈಕ್ ಮೂಲಕ ಬೆಂಗಳೂರಿಗೆ ತೆರಳಿ ಹೋರಾಟ ನಡೆಸಲಾಗುವುದೆಂದು ಹೇಳಿದರು. ತಾಲ್ಲೂಕು ಸಂಘಟನಾ ಸಂಚಾಲಕರಾದ ನಾಗನಾಯಕನಹಳ್ಳಿ ರಮೇಶ್, ಸಿ.ಮುನಿರಾಜು, ಸದಸ್ಯರಾದ ಕೃಷ್ಣಪ್ಪ ನಾಯಕ, ಸಿ.ರಾಮಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.