ADVERTISEMENT

ಪಕ್ಷ ಸಂಘಟನೆಗೆ ಆದ್ಯತೆ: ನಿಖಿಲ್‌ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 13:54 IST
Last Updated 3 ಜೂನ್ 2019, 13:54 IST
ವಿಜಯಪುರ ಹೋಬಳಿ ಬುಳ್ಳಹಳ್ಳಿಗೆ ಭೇಟಿ ನೀಡಿದ್ದ ನಿಖಿಲ್‌ಕುಮಾರಸ್ವಾಮಿ ಅವರೊಂದಿಗೆ ಜೆಡಿಎಸ್ ಮುಖಂಡರು ಚರ್ಚೆ ನಡೆಸಿದರು
ವಿಜಯಪುರ ಹೋಬಳಿ ಬುಳ್ಳಹಳ್ಳಿಗೆ ಭೇಟಿ ನೀಡಿದ್ದ ನಿಖಿಲ್‌ಕುಮಾರಸ್ವಾಮಿ ಅವರೊಂದಿಗೆ ಜೆಡಿಎಸ್ ಮುಖಂಡರು ಚರ್ಚೆ ನಡೆಸಿದರು   

ವಿಜಯಪುರ: ‘ಚುನಾವಣೆಯ ಸೋಲಿನಿಂದ ಉತ್ತಮ ಪಾಠ ಕಲಿತಿರುವೆ. ಮುಂದಿನ ದಿನಗಳಲ್ಲಿ ನನ್ನ ತಾತ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಹೋಬಳಿಯ ಬುಳ್ಳಹಳ್ಳಿ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ್ದ ಅವರು, ಕಾರ್ಯಕರ್ತರು, ಮುಖಂಡರೊಂದಿಗೆ ಮಾತುಕತೆ ನಡೆಸಿದರು.

‘ಮಂಡ್ಯದಲ್ಲಿ ಗೆಲುವು ಸಾಧಿಸಿರುವ ನೂತನ ಸಂಸದೆ ಸುಮಲತಾ ಅವರಿಗೂ ಅಭಿನಂದಿಸುತ್ತೇನೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಮೇಲೂರು ಬಿ.ಎನ್.ರವಿಕುಮಾರ್ ಅವರ ಜೊತೆಗೂಡಿ ಪ್ರವಾಸ ಕೈಗೊಳ್ಳುತ್ತೇನೆ. ಪಕ್ಷದ ಕಾರ್ಯಕರ್ತರು ದೃತಿಗೆಡಬಾರದು. ಒಂದು ಸೋಲು ಹಲವು ಪಾಠವನ್ನು ಕಲಿಸುತ್ತದೆ. ಕಾರ್ಯಕರ್ತರನ್ನು ಗಟ್ಟಿಗೊಳಿಸಲು, ಆತ್ಮಸ್ಥೈರ್ಯ ತುಂಬಲು ಹಾಗೂ ಪಕ್ಷವನ್ನು ಗಟ್ಟಿಗೊಳಿಸಲು ಖುದ್ದಾಗಿ ಎಲ್ಲೆಡೆ ಸಂಚರಿಸುತ್ತೇನೆ’ ಎಂದರು.

ADVERTISEMENT

‘ಮಂಡ್ಯದ ಜಿಲ್ಲೆಯ ಎಂಟು ತಾಲ್ಲೂಕುಗಳಲ್ಲಿ ಓಡಾಡಿದ ಮೇಲೆ ಸಾಕಷ್ಟು ಕಲಿತಿದ್ದೇನೆ. ಮುಂಚೆ ನಾನಿದ್ದ ಮನಸ್ಥಿತಿಗೂ ಈಗಿನ ಮನಸ್ಥಿತಿಗೂ ಸಾಕಷ್ಟು ಪಕ್ವವಾಗಿದ್ದೇನೆ. ಮಂಡ್ಯದಲ್ಲೇ ವಾಸವಿರಲಿದ್ದೇನೆ. ಮಂಡ್ಯದಲ್ಲಿ ಈಗಾಗಲೇ ಎರಡು ಎಕರೆ ನೀರಾವರಿ ಇರುವ ತೋಟಕ್ಕಾಗಿ ಹುಡುಕಾಟ ನಡೆಸಿದ್ದೇನೆ. ಅಲ್ಲಿಯೇ ಶೆಡ್ ಹಾಕಿಕೊಂಡು ಇರುತ್ತೇನೆ. ಕೃಷಿ ಮಾಡುತ್ತಾ ಜನರೊಂದಿಗೆ ಬೆರೆಯುತ್ತೇನೆ. ಜನರ ನಾಡಿಮಿಡಿತ ಅರಿತಿದ್ದೇನೆ. ಇನ್ನು ರಾಜ್ಯದ ಜನರ ನಾಡಿಮಿಡಿತ ಅರಿಯಬೇಕಿದೆ. ಜನರೊಂದಿಗೆ ಬೆರೆತರಷ್ಟೆ ಸ್ಥಿತಿ-ಗತಿಗಳು ಗೊತ್ತಾಗುತ್ತದೆ. ಇನ್ನು ಮುಂದೆ ಜನರೊಂದಿಗೆ ಇರಲಿದ್ದೇನೆ’ ಎಂದರು.

ಜೆಡಿಎಸ್ ಮುಖಂಡ ಮೇಲೂರು ರವಿಕುಮಾರ್ ಮಾತನಾಡಿ, ‘ಜೀವನದಲ್ಲಿ ಒಂದು ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಜೀವನ ಮುಗಿಯುವುದಿಲ್ಲ. ಈಗ ಹೊಸ ಅಧ್ಯಾಯ ಆರಂಭವಾಗುತ್ತಿದೆ. ನಮ್ಮನ್ನು ಬೆಂಬಲಿಸುವ ಕಾರ್ಯಕರ್ತರಿಗೆ ಕೊರತೆಯಿಲ್ಲ. ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಗಟ್ಟಿಯಾಗಿದೆ. ರಾಜ್ಯದಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೇಲಿನ ಅಭಿಮಾನ ಕುಗ್ಗಿಲ್ಲ. ಅವರು ಮಾಡುತ್ತಿರುವ ಜನಪರ ಕೆಲಸಗಳ ಬಗ್ಗೆ ಹೆಚ್ಚು ಪ್ರಚಾರ ಪಡೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಒಳ್ಳೆಯ ದಿನಗಳು ಬರಲಿವೆ’ ಎಂದರು.

ಜೆಡಿಎಸ್ ಮುಖಂಡ ಸುನಿಲ್, ತಾದೂರು ರಘು, ಕಿಶೋರ್, ಹರ್ಷವರ್ಧನ್, ಧರ್ಮೇಂದ್ರ, ರಾಜಶೇಖರ್, ಮಳ್ಳೂರು ರಾಜೇಶ್, ಎಸ್.ಎಂ.ಎಸ್.ಶ್ರೀನಿವಾಸ್, ಗಜೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.