ಆನೇಕಲ್ : ಬನ್ನೇರುಘಟ್ಟ ಜೈವಿಕ ಉದ್ಯಾನ ಮತ್ತು ಬಿಹಾರದ ಪಟ್ನಾ ಸಂಜಯಗಾಂಧಿ ಜೈವಿಕ ಉದ್ಯಾನ ನಡುವೆ ಪ್ರಾಣಿ ವಿನಿಮಯ ಯೋಜನೆಯಡಿ, ಅಳಿವಿನಂಚಿನಲ್ಲಿರುವ ಬಿಳಿ ಹುಲಿ, ಕಾಡು ಬೆಕ್ಕು, ಘರಿಯಲ್ ಮೊಸಳೆಯನ್ನು ಇಲ್ಲಿನ ಉದ್ಯಾನಕ್ಕೆ ಶುಕ್ರವಾರ ತರಲಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಒಂದು ಜೀಬ್ರಾ ಮತ್ತು ಎರಡು ಗಂಡು ತಮಿನ್ ಜಿಂಕೆಗಳನ್ನು ಪಟ್ನಾ ಮೃಗಾಲಯಕ್ಕೆ ಕಳುಹಿಸಲಾಗಿದೆ. ಪ್ರಾಣಿಗಳು ಆರೋಗ್ಯವಾಗಿವೆ. 45 ದಿನ ಕ್ವಾರೆಂಟೈನ್‌ನಲ್ಲಿಟ್ಟು ನಂತರ ವೀಕ್ಷಣೆಗೆ ಬಿಡಲಾಗುತ್ತಿದೆ.
ನವದೆಹಲಿ ಕೇಂದ್ರ ಮೃಗಾಲಯ ಪ್ರಾಧಿಕಾರ ಅನುಮೋದನೆಯಂತೆ ಪ್ರಾಣಿ ವಿನಿಮಯ ನಡೆದಿದೆ. ಎರಡು ಮೃಗಾಲಯಗಳಲ್ಲಿನ ಪ್ರಾಣಿಗಳ ಸಂರಕ್ಷಣೆ, ಸಂತಾನೋತ್ಪತ್ತಿ ಕಾರ್ಯ ಬಲಪಡಿಸುವ ಗುರಿ ಹೊಂದಲಾಗಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ಮಾಹಿತಿ ನೀಡಿದರು.
ಪಟ್ನಾ ಮೃಗಾಲಯದಿಂದ ಪ್ರಾಣಿಗಳನ್ನು ತರುವ ಸಂದರ್ಭದಲ್ಲಿ ಬುಧವಾರ ತೆಲಂಗಾಣ ರಾಜ್ಯದ ನಿರ್ಮಲ್ ಎಂಬಲ್ಲಿ ಲಾರಿ ಸ್ಕಿಡ್ ಆಗಿ ಅಪಘಾತಕ್ಕೀಡಾಗಿತ್ತು. ಪ್ರಾಣಿ ಪಾಲಕ ಹರಿಶ್ಚಂದ್ರ ಅವರು ಪ್ರಯತ್ನ ಮಾಡಿ ಪ್ರಾಣಿಗಳನ್ನು ಸುರಕ್ಷಿತವಾಗಿ ಬೇರೊಂದು ವಾಹನಕ್ಕೆ ಸ್ಥಳಾಂತರಿಸಿ ಯಾವುದೇ ತೊಂದರೆ ಇಲ್ಲದಂತೆ ಬನ್ನೇರುಘಟ್ಟಕ್ಕೆ ತರಲಾಗಿದೆ. ಪಶು ವೈದ್ಯಾಧಿಕಾರಿ ಆನಂದ್ ಪ್ರಾಣಿಗಳ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದರು.
ಇಲ್ಲಿನ ಉದ್ಯಾನದಲ್ಲಿ ನಾಲ್ಕು ಘರಿಯಲ್ ಮೊಸಳೆಗಳಿದ್ದು ವಯಸ್ಸಾಗಿವೆ. ಸಂತಾನೋತ್ಪತ್ತಿಗಾಗಿ ಎರಡು ಗಂಡು ಮತ್ತು ಒಂದು ಹೆಣ್ಣು ಘರಿಯಲ್ ಮೊಸಳೆ ತರಲಾಗಿದೆ. ಉದ್ಯಾನದಲ್ಲಿ ಝಾನ್ಸಿ ಮತ್ತು ವೀರ್ ಎಂಬ ಎರಡು ಬಿಳಿ ಹುಲಿಗಳಿದ್ದವು. ಈಗ ಪಟ್ನಾದ ಅತಿಥಿ ಆಗಮನದಿಂದಾಗಿ ಬಿಳಿ ಹುಲಿಗಳ ಸಂಖ್ಯೆ ಮೂರಕ್ಕೇರಿದೆ. ಕಾಡು ಬೆಕ್ಕು ಸಹ ಹೆಣ್ಣು ಬೆಕ್ಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.