ದೇವನಹಳ್ಳಿ: ಪಟ್ಟಣದ ಹೊರವಲಯದಲ್ಲಿ ಕೋಟ್ಯಂತರ ವೆಚ್ಚ ಮಾಡಿ ಪೊಲೀಸ್ ಇಲಾಖೆ ನಿರ್ಮಿಸಿರುವ ವಸತಿ ಗೃಹಗಳು ಪಾಳು ಬಿದ್ದು, ಭೂತ ಬಂಗಲೆಗಳಾಗಿ ಬದಲಾಗಿದ್ದು, ಪುಂಡರ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ.
ದೊಡ್ಡಬಳ್ಳಾಪುರ ಮಾರ್ಗವಾಗಿ ಇರುವ ಸಾವಕನಹಳ್ಳಿ ಗೇಟ್ ಬಳಿ ಪೊಲೀಸ್ ಸಿಬ್ಬಂದಿಗೆ ನಿರ್ಮಿಸಿರುವ ಆರು ಬ್ಲಾಕ್‌ಗಳಲ್ಲಿ ಒಟ್ಟು 56 ಮನೆಗಳಿವೆ. ಅವುಗಳ ಪೈಕಿ ಒಂದೆರೆಡು ಮನೆಯಲ್ಲಿ ಮಾತ್ರವೇ ಪೊಲೀಸರ ಕುಟುಂಬ ವಾಸವಿದೆ.
12 ವರ್ಷದ ಹಿಂದೆ ಈ ಪೊಲೀಸ್ ವಸತಿ ಗೃಹ ನಿರ್ಮಿಸಲಾಗಿದೆ. ಇಲ್ಲಿಗೆ ವಾಸಕ್ಕೆ ಬರಲು ಸಿಬ್ಬಂದಿ ಹಿಂಜರಿಯುತ್ತಿದ್ದಾರೆ. ದೇವನಹಳ್ಳಿ ಪಟ್ಟಣ ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಈ ಮೊದಲು ಕರ್ತವ್ಯ ನಿರ್ವಹಿಸಿ ಪೊಲೀಸರ ಕುಟುಂಬಗಳು ಅಲ್ಲಿಯೇ ನೆಲೆಸಿದ್ದು, ಅವರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ, ಮುಂದಿನ ಭವಿಷ್ಯದ ಹಿತದೃಷ್ಠಿಯಿಂದ ಹಲವರು ದೇವನಹಳ್ಳಿಗೆ ಸ್ಥಳಾಂತರವಾಗಿಲ್ಲ.
ನಿತ್ಯವೂ ಬೆಂಗಳೂರಿ ಸೇರಿದಂತೆ ಸುತ್ತಮುತ್ತಲಿನ ಊರಿನಿಂದ ಓಡಾಟ ಮಾಡಿಕೊಂಡು, ಕರ್ತವ್ಯ ನಿರ್ವಹಿಸುತ್ತ ಸಮನ್ವಯತೆ ಸಾಧಿಸುತ್ತಿದ್ದಾರೆ. ಹೀಗಾಗಿ ಮಂಚೇನಹಳ್ಳಿ ಬಳಿ ನಿರ್ಮಿಸಿರುವ ಮನೆಗಳ ಅಗತ್ಯತೆ ಎದುರಾಗಿಲ್ಲ, ಇದರಿಂದಾಗಿ ಬಳಕೆಯಾಗದ ಕಟ್ಟಡಗಳು ಗೆದ್ದಲು ಹಿಡಿದು ಹಾಳಾಗುತ್ತಿದೆ.
ಪಟ್ಟಣದಿಂದ 3 ಕಿ.ಮೀ ದೂರದಲ್ಲಿ ನಿರ್ಮಾಣವಾಗಿರುವ ಪೊಲೀಸ್ ವಸತಿ ಗೃಹಗಳು ವಾಸ ಯೋಗ್ಯವಾದ ಲಕ್ಷಣಗಳಿಂದ ಕೂಡಿಲ್ಲ, ಈ ಕಟ್ಟಡಗಳಿಗೆ ಮೂಲ ಸೌಕರ್ಯವೂ ಇಲ್ಲ. ಹೀಗಾಗಿ ಸಿಬ್ಬಂದಿಗಳು ಇಲ್ಲಿ ವಾಸಿಸಲು ಹಿಂಜರಿಯುತ್ತಿದ್ದಾರೆ.
ನಿತ್ಯ 12 ಗಂಟೆ ಕರ್ತವ್ಯ ಮಾಡಿ ಬಸವಳಿದು ಹೋಗುವ ಪೊಲೀಸರಿಗೆ ಮನೆಯ ನೆಮ್ಮದಿ ತಾಣವಾಗಿದ್ದು, ಈ ವಸತಿ ಗೃಹಗಳ ಅವ್ಯವಸ್ಥೆಯಿಂದಾಗಿ ಇಲ್ಲಿಗೆ ಬರಲು ಮನಸ್ಸು ಮಾಡುವುದಿಲ್ಲ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕಟ್ಟಿರುವ ಕಟ್ಟಡಗಳಿಗೆ ಇಂದಿಗೂ ನೀರು, ಚರಂಡಿ, ಭದ್ರತೆ, ವಿದ್ಯುತ್ ಕಲ್ಪಿಸಿಲ್ಲ.
ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕಟ್ಟಡಕ್ಕೆ ಮೂಲ ಸೌಕರ್ಯ ಕಲ್ಪಿಸಿ, ಸಿಬ್ಬಂದಿ ವಾಸಿಸಲು ಯೋಗ್ಯವಾದಂತಹ ವಾತಾವರಣ ನಿರ್ಮಾಣ ಮಾಡಿ ಕಟ್ಟಡವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಇಲ್ಲವಾದರೆ ವಸತಿ ನಿಲಯಗಳಿಗೆ ಈ ಕಟ್ಟಡ ನೀಡಿದರೇ ಮಕ್ಕಳಿಗೆ ಅನುಕೂಲವಾಗುತ್ತದೆ.
ವಸತಿ ಗೃಹಗಳ ಸುತ್ತಲೂ ಗಿಡಗಂಡಿಗಳಿಂದ ತುಂಬಿದ್ದು ನೀಲಗಿರಿ ಮರಗಳ ಎತ್ತೇಚ್ಚವಾಗಿದೆ. ಗಿಡ ಗಂಟಿಗಳು ಬೆಳೆದು ಪೊದೆಗಳು ಕಟ್ಟಡವನ್ನು ಆವರಿಸಿದೆ. ಇಂದಿಗೂ ಸಂಜೆ ವೇಳೆ ಇಲ್ಲಿ ಓಡಾಡಲು ಜನ ಭಯಪಡುತ್ತಿದ್ದರೆ. ಪುಂಡರ ಹಾವಳಿಯಿಂದ ಕಟ್ಟಡದ ಕಿಟಕಿ ಗಾಜುಗಳು ಪುಡಿ ಪುಡಿಯಾಗಿದ್ದು ಸುಣ್ಣ ಬಣ್ಣವಿಲ್ಲದೇ ಗೋಡೆಗಳು ಮಾಸಿ ಹೋಗಿದೆ. ಸ್ವಚ್ಛತೆ ಇಲ್ಲದೇ ಗಬ್ಬು ನಾರುತ್ತಿದ್ದು ಕಿಟಕಿ ಬಾಗಿಲುಗಳು ಗೆದ್ದಲು ಹಿಡಿದು ಶಿಥಿಲಾವಸ್ಥೆಗೆ ತಲುಪುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.