ಆನೇಕಲ್:ತಾಲ್ಲೂಕಿನ ಎಲೆಕ್ಟ್ರಾನಿಕ್‌ಸಿಟಿಯ ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್‌ಮೇಷನ್ ಟೆಕ್ನಾಲಜಿ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ‘ಪ್ರವಾಹಮ್’ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಾರ್ಯಕ್ರಮವು ಸೋಮವಾರ ನಡಯಿತು.
ಡಾ.ಮಂಜು ಎಲಂಗ್ಬಾಮ್ ಮತ್ತು ತಂಡದಿಂದ ಆಕರ್ಷಕ ಮಣಿಪುರಿ ನೃತ್ಯ ನಡೆಯಿತು. ರಾಧ ಕೃಷ್ಣರ ನೃತ್ಯರೂಪಕ ಗಮನ ಸೆಳೆಯಿತು. ಡಾ.ಮಂಜು ಕೃಷ್ಣನ ಪಾತ್ರದಲ್ಲಿ ಮತ್ತು ನಂದೈಬಾಮ್ ಸುರ್ಜಾಬಾಲಾಚಾನು ರಾಧೆ ಪಾತ್ರದಲ್ಲಿ ಪ್ರೇಕ್ಷಕರ ಮನ ಸೆಳೆದರು. ಮಣಿಪುರಿ ನೃತ್ಯ ಮತ್ತು ಸಾಂಸ್ಕೃತಿಕ ಪರಂಪರೆ ಬಗ್ಗೆ ಡಾ.ಮಂಜು ಎಲಂಗ್ಬಾಮ್ ಅವರು ವಿದ್ಯಾರ್ಥಿಗಳು ಮತ್ತು ಪ್ರೇಕ್ಷಕರೊಂದಿಗೆ ಸಂವಾದ
ನಡೆಸಿದರು.
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಸುಧಾ ರಘುನಾಥನ್ ಅವರು ಕರ್ನಾಟಿಕ್ ಗಾಯನ ನಡೆಸಿಕೊಟ್ಟರು. ಪಂಡಿತ್ ರೋನು ಮಜುಂದಾರ್ ಅವರು ಹಿಂದೂಸ್ತಾನಿ ಕೊಳಲು ವಾದನ ನಡೆಸಿಕೊಟ್ಟರು.
ಐಐಟಿಬಿಯ ಪ್ರೊ.ದೇಬಬ್ರತದಾಸ್ ಮಾತನಾಡಿ, ‘ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಯುವ ಸಮುದಾಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಭಾರತದ ವಿವಿಧ ಸಾಂಸ್ಕೃತಿಕ ಪ್ರಕಾರಗಳ ಪ್ರದರ್ಶನದಿಂದ ವಿದ್ಯಾರ್ಥಿಗಳಲ್ಲಿ ನೃತ್ಯ, ಸಂಗೀತ ಪರಂಪರೆ ಬಗ್ಗೆ ಅರಿವು ಮೂಡಿಸುವಲ್ಲಿ ಸಹಕಾರಿಯಾಗಲಿದೆ’ ಎಂದರು.
ಮಣಿಪುರಿ ನೃತ್ಯ ಸಂಯೋಜಕ ಡಾ.ಮಂಜು ಎಲಂಗ್ಬಾಮ್ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಭಾರತೀಯ ಕಲೆಗಳು ಅಳಿವಿನಂಚಿನಲ್ಲಿವೆ. ಯುವ ಸಮುದಾಯವು ಪ್ರಾಚೀನ ಕಲೆ, ಸಂಸ್ಕೃತಿ ಬಗ್ಗೆ ಜ್ಞಾನ ಹೊಂದಬೇಕು ಮತ್ತು ಸಂಶೋಧನೆ ನಡೆಸಬೇಕು. ಡಿಜೆ ಆರ್ಭಟದಲ್ಲಿ ಪಾರಂಪರಿಕ ಸಾಂಸ್ಕೃತಿಕ ವೈಭವ ಮರೆಯಾಗಿದೆ ಎಂದು
ವಿಷಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.