ADVERTISEMENT

ಪಿ.ರಂಗನಾಥಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ: ಹೊರಗೆ ಥಳಕು, ಒಳಗೆ ಹುಳುಕು

ಪಿ.ರಂಗನಾಥಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸ್ಥಿತಿ

ಎಂ.ಮುನಿನಾರಾಯಣ
Published 28 ಜೂನ್ 2024, 4:12 IST
Last Updated 28 ಜೂನ್ 2024, 4:12 IST
ವಿಜಯಪುರ ಹೋಬಳಿ ಪಿ.ರಂಗನಾಥಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಹೊರಭಾಗ
ವಿಜಯಪುರ ಹೋಬಳಿ ಪಿ.ರಂಗನಾಥಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಹೊರಭಾಗ   

ವಿಜಯಪುರ(ದೇವನಹಳ್ಳಿ): ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿ.ರಂಗನಾಥಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ಹಳೆಯದಾಗಿದೆ. ಹೊರಗೆ ಮಾತ್ರ ಸುಣ್ಣ, ಬಣ್ಣ ಬಳಿದು, ನೆಲಕ್ಕೆ ಟೈಲ್ಸ್ ಹಾಕಲಾಗಿದೆ. ಆದರೆ, ಒಳಭಾಗದ ಕಟ್ಟಡವೆಲ್ಲ ಸೋರುತ್ತಿದ್ದು, ಮಕ್ಕಳ ಕಲಿಕೆಗೆ ಯೋಗ್ಯವಾಗಿಲ್ಲದಂತಾಗಿದೆ.

1962ರಲ್ಲಿ ಸ್ಥಾಪನೆಯಾಗಿರುವ ಶಾಲೆ ಕಟ್ಟಡದಲ್ಲಿ ಒಳಗೆ ಗೋಡೆಗಳು ಬಿರುಕು ಬಿಟ್ಟಿವೆ. ಕೊಠಡಿಯೊಂದರ ಮೇಲೆ ನೀರು ನಿಂತು ತೇವಗೊಂಡಿದೆ. ನೀರು ಸೋರುವ ಜಾಗದಲ್ಲೇ ಶಾಲೆ ಮಕ್ಕಳಿಗೆ ಶುದ್ಧ ಕುಡಿಯುವ ನೀರಿಗಾಗಿ ಫಿಲ್ಟರ್ ಅಳವಡಿಸಲಾಗಿದೆ. ಅಲ್ಲೇ ವಿದ್ಯುತ್ ತಂತಿಗಳು ಹಾದು ಹೋಗಿವೆ. ಸ್ವಿಚ್ ಅಳವಡಿಸಲಾಗಿದೆ. ಮಕ್ಕಳು ಆಕಸ್ಮಾತ್ತಾಗಿ ನೀರು ಸುರಿಯುವಾಗ ಸ್ವಿಚ್ ಮುಟ್ಟಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಕೊಠಡಿಯೊಳಗೆ ಗೋಡೆಗಳು ಬಿರುಕು ಬಿಟ್ಟುಕೊಂಡಿವೆ.

ಈ ಶಾಲೆಯಲ್ಲಿ 13 ಮಂದಿ ಮಕ್ಕಳಿದ್ದಾರೆ. ಗಂಡು ಮಕ್ಕಳು 6 ಮಂದಿ, ಹೆಣ್ಣು ಮಕ್ಕಳು 7 ಮಂದಿ ಇದ್ದಾರೆ. ಇಬ್ಬರು ಶಿಕ್ಷಕರಿದ್ದಾರೆ. ಅಡುಗೆ ಕೊಠಡಿಯಿಲ್ಲ. ಇರುವ ಕೊಠಡಿ ಶಿಥಿಲವಾಗಿದೆ. ಈ ಕಾರಣ, ಶಾಲೆ ಕೊಠಡಿಯೊಂದರಲ್ಲಿ ಆಹಾರ ಧಾನ್ಯ ದಾಸ್ತಾನು ಮಾಡಲಾಗಿದೆ. ಎಲ್ಲ ಸಾಮಗ್ರಿ ಜೋಡಿಸಿದ್ದಾರೆ. ಅಲ್ಲೇ ಅಡುಗೆ ತಯಾರು ಮಾಡುತ್ತಾರೆ. ಶಾಲೆ ಅಡುಗೆ ಕೋಣೆಗೆ ಮಕ್ಕಳು ಪ್ರವೇಶಿಸಬಾರದೆಂದು ನಿಯಮವಿದ್ದರೂ ಮಕ್ಕಳು ಕುಡಿಯುವ ನೀರಿಗಾಗಿ ಅನಿವಾರ್ಯವಾಗಿ ಅಡುಗೆ ಕೋಣೆಗೆ ಪ್ರವೇಶಿಸಬೇಕಾಗಿದೆ.

ADVERTISEMENT

ಶಾಲೆಯಲ್ಲಿ ಒಂದು ಶೌಚಾಲಯ ಮಾತ್ರ ಸುಸಜ್ಜಿತವಾಗಿದೆ. ಮಕ್ಕಳು ಮತ್ತು ಶಿಕ್ಷಕರು ಇದೇ ಶೌಚಾಲಯ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಶಾಲೆ ಹಿಂಭಾಗದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಶಾಲೆ ಮುಂಭಾಗದಲ್ಲಿ ಮಳೆ ಬಿದ್ದಾಗ ಸಂಚಾರ ಮಾಡಲು ಆಗುವುದಿಲ್ಲ. ಕೆಸರುಗದ್ದೆಯಂತಾಗುತ್ತದೆ. ಅಲ್ಲಲ್ಲಿ ಕಲ್ಲುಗಳನ್ನು ಹಾಕಿಕೊಂಡು ಶಾಲೆ ಕೊಠಡಿಯೊಳಗೆ ಮಕ್ಕಳು ಹೋಗಬೇಕಾಗಿದೆ. ಆದ್ದರಿಂದ ಸರ್ಕಾರ ಈ ಹಳೆ ಕಟ್ಟಡ ತೆರವುಗೊಳಿಸಿ, ಹೊಸ ಕಟ್ಟಡ  ನಿರ್ಮಿಸಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಶಾಲೆಯ ಕೊಠಡಿ ಗೋಡೆ ಬಿರುಕು ಬಿಟ್ಟಿರುವುದು.
ಶಾಲೆ ಕೊಠಡಿಯಲ್ಲಿ ನೀರು ಸೋರುತ್ತಿರುವುದು
ಕೊಠಡಿಯಲ್ಲೆ ಅಡುಗೆ ತಯಾರಿಕೆ ಮಾಡುವ ಸಾಮಗ್ರಿ ಜೋಡಿಸಿಟ್ಟಿರುವುದು
ಅಡುಗೆ ಕೋಣೆ ಮತ್ತು ಶೌಚಾಲಯ ನಿರ್ಮಿಸಿಕೊಡಿ ಎಂದು ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಕೊಟ್ಟಿದ್ದೇವೆ. ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಇದುವರೆಗೂ ಸಾಧ್ಯವಾಗಿಲ್ಲ.
ಎಚ್.ಬಾಬಾಜಾನ್. ಮುಖ್ಯ ಶಿಕ್ಷಕ ಪಿ.ರಂಗನಾಥಪುರ
ಸರ್ಕಾರಿ ಶಾಲೆಯಲ್ಲಿ ಅಡುಗೆ ಕೋಣೆ ಹಾಗೂ ಶೌಚಾಲಯ ನಿರ್ಮಿಸಲು ನರೇಗಾ ಯೋಜನೆಯಲ್ಲಿ ಕ್ರಿಯಾಯೋಜನೆ ಮಾಡಿಕೊಳ್ಳಲು ಅವಕಾಶವಿದೆ. ಇದುವರೆಗೂ ಗಮನಕ್ಕೆ ಬಂದಿಲ್ಲ.
-ಎಂ.ಜಗದೀಶ್ ಗ್ರಾಮ ಪಂಚಾಯಿತಿ ಅಧ್ಯಕ್ಷ
ಶಾಲೆ ಆವರಣದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಅಧಿಕಾರಿಗಳ ಸಮನ್ವಯ ಕೊರತೆಯಿಂದ ನನೆಗುದಿಗೆ ಬಿದ್ದಿದೆ
ಆನಂದಮ್ಮ ಗ್ರಾಮ ಪಂಚಾಯಿತಿ ಸದಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.