ವಿಜಯಪುರ: ಮಾ.1ರಂದು ಆರಂಭಗೊಳ್ಳಲಿರುವ ದ್ವಿತೀಯ ಪಿಯು ಪರೀಕ್ಷೆಗೆ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರಗತಿ ಪದವಿ ಪೂರ್ವ ಕಾಲೇಜುಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಎರಡು ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 1ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಪರೀಕ್ಷಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಕೊಠಡಿಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಎಲ್ಲ ಕೊಠಡಿಗಳಲ್ಲಿ ಪರೀಕ್ಷಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಆಸನ ಹಾಗೂ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ವಿಜ್ಞಾನ ಮತ್ತು ಗಣಿತ ವಿಷಯಗಳ ಪರೀಕ್ಷೆ ನಡೆಯುವಾಗ ವಿದ್ಯಾರ್ಥಿಗಳಿಗೆ ಅಗತ್ಯ ಪರೀಕ್ಷಾ ಉಪಕರಣ ಕಾಲೇಜಿನಿಂದಲೇ ವಿತರಣೆ ಮಾಡಲಾಗುವುದು. ಕೇಂದ್ರದೊಳಗೆ ಪ್ರವೇಶಿಸುವ ವಿದ್ಯಾರ್ಥಿಗಳು ಡಿಜಿಟಲ್ ವಾಚ್, ಮೊಬೈಲ್ ತರುವಂತಿಲ್ಲ. ಕೊಠಡಿ ಮೇಲ್ವಿಚಾರಕರೂ ಮೊಬೈಲ್ ಬಳಸುವಂತಿಲ್ಲ ಎಂದು ತಿಳಿಸಿದರು.
‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಪ್ರಶ್ನೆಗಳ ಬಗ್ಗೆ ಇಲಾಖೆ ಸೈಬರ್ ಕ್ರೈಂ ಮುಖಾಂತರ ಸೂಕ್ತ ಕ್ರಮ ಕೈಗೊಳ್ಳಲಿದೆ. ವಿದ್ಯಾರ್ಥಿಗಳು ಪರೀಕ್ಷೆ ಮುಕ್ತಾಯವಾಗುವವರೆಗೂ ಮೊಬೈಲ್ ಬಳಸದಂತೆ ಸೂಚನೆ ನೀಡಲಾಗಿದೆ’ ಎಂದು ಪ್ರಾಂಶುಪಾಲ ಮಾರ್ಟಿನ್ ಮಾಹಿತಿ ನೀಡಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 396 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 20ಮಂದಿ ಕೊಠಡಿ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಜಾಗೃತದಳದ ಸಿಬ್ಬಂದಿ ವೀಕ್ಷಣೆಯಲ್ಲಿದ್ದಾರೆ. ಸ್ಥಾನಿಕ ಜಾಗೃತದಳದವರು ಈ ಬಾರಿ ಕಾರ್ಯನಿರ್ವಹಿಸಲಿದ್ದಾರೆ. ಪುರಸಭೆಯಿಂದ ಕೊಠಡಿಗಳ ಸ್ವಚ್ಚತಾ ಕಾರ್ಯ ಮುಗಿದಿದೆ.
ಪರೀಕ್ಷಾ ಕೇಂದ್ರದ ಸುತ್ತಲೂ 200ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಂಚಾರ ನಿಷೇಧವಿದ್ದು, ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಭದ್ರತೆಯಲ್ಲಿ ಪ್ರಶ್ನೆ ಪತ್ರಿಕೆ ತಲುಪಲಿದೆ. ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆ ಬರೆಯುವ ಕಡೆಗೆ ಗಮನಹರಿಸಬೇಕು. ಪ್ರಶ್ನೆಪತ್ರಿಕೆ ಕುರಿತು ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.