ವಿಜಯಪುರ (ಬೆಂ.ಗ್ರಾಮಾಂತರ):ಶ್ರಾವಣ ಮಾಸವು ಕೊನೆಯಾಗಿ ಭಾದ್ರಪದ ಮಾಸ ಆರಂಭವಾಗಿದೆ. ಈ ಮಾಸದ ಮೊದಲ ವಾರದಲ್ಲಿಯೇ ಗೌರಿ–ಗಣೇಶ ಹಬ್ಬ ಬಂದಿರುವ ಕಾರಣ ರೈತರು ಬೆಳೆದಿರುವ ಹೂವಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕಿದೆ. ಇದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ.
ಮಳೆ ಕೊರತೆಯಿಂದ ಬಹಳಷ್ಟು ರೈತರು ತಮ್ಮ ತೋಟಗಳಲ್ಲಿ ಬೆಳೆದಿದ್ದ ಹೂವಿನ ಗಿಡಗಳನ್ನು ಕಿತ್ತು ಹಾಕಿದ್ದರು. ಈ ಕಾರಣದಿಂದ ಬೆಳೆಯುವವರ ಸಂಖ್ಯೆಯೂ ಕಡಿಮೆಯಾಗಿತ್ತು. ಹೂ ಬೆಳೆಯುವ ಪ್ರಮಾಣ ಕುಸಿದಿದ್ದರಿಂದ ಮಾರುಕಟ್ಟೆಯಲ್ಲಿ ಹೂವಿನ ಆವಕ ಕಡಿಮೆಯಾಗಿದೆ.
ಕೆಲವು ರೈತರು ಗೌರಿ–ಗಣೇಶ ಹಬ್ಬಕ್ಕೆ ಉತ್ತಮ ಬೆಲೆ ಸಿಗುತ್ತದೆ ಎಂದು ಹೂವಿನ ಬೆಳೆ ಇಟ್ಟಿದ್ದರೂ ಕಳೆದ ತಿಂಗಳಿನಲ್ಲಿ ಬಿದ್ದ ಮಳೆಯಿಂದ ಕೆಲವು ತೋಟಗಳು ನಾಶವಾಗಿದ್ದವು. ಬೇಡಿಕೆಗೆ ತಕ್ಕಂತೆ ಹೂ ಬಾರದ ಕಾರಣ ಮಾರುಕಟ್ಟೆಗೆ ಬರುತ್ತಿರುವ ಹೂವಿಗೆ ಸಹಜವಾಗಿ ಬೆಲೆ ಏರಿಕೆಯಾಗಿದೆ ಎಂದು ರೈತ ಶ್ರೀನಿವಾಸ್ ಹೇಳಿದರು.
ದೇವನಹಳ್ಳಿ ತಾಲ್ಲೂಕಿನಲ್ಲಿ ಪ್ರಮುಖವಾಗಿ ಸೇವಂತಿಗೆ, ಗುಲಾಬಿ, ಚೆಂಡು ಹೂ, ಕನಕಾಂಬರ, ಕಾಕಡ, ಮಲ್ಲಿಗೆ ಹೂವು ಬೆಳೆಯುತ್ತಾರೆ. ಈ ಭಾಗದ ರೈತರು ಹೂವನ್ನು ಚಿಕ್ಕಬಳ್ಳಾಪುರದ ಮಾರುಕಟ್ಟೆಗೆ ಸರಬರಾಜು ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಬೆಳಿಗ್ಗೆ 10 ಗಂಟೆ ವೇಳೆಗೆ ಹೂವಿನ ವಹಿವಾಟು ಆರಂಭವಾಗುತ್ತದೆ. ಪ್ರತಿನಿತ್ಯ ಮಧ್ಯಾಹ್ನ 12 ಗಂಟೆ ವೇಳೆಗೆ ತಾಜಾ ಹೂವಿನ ಆವಕವಾಗುತ್ತದೆ.
ಅದಕ್ಕೂ ಮುನ್ನಾ ಹಿಂದಿನ ದಿನ ಖರೀದಿಯಾಗದೆ ಉಳಿದ ಹೂವಿನ ವಹಿವಾಟು ನಡೆಯುತ್ತದೆ. ಇದರಿಂದ ನಮಗೆ ಮಾರುಕಟ್ಟೆಯ ಸಮಸ್ಯೆಯಿಲ್ಲ ಎಂದು ರೈತ ಹರೀಶ್ ಹೇಳಿದರು.
ಚೆಂಡು ಹೂ ಒಂದು ಕೆ.ಜಿಗೆ ₹ 50, ಗುಲಾಬಿ ₹ 120, ಮಲ್ಲಿಗೆ ₹ 400, ಕಾಕಡ ₹ 300, ಕನಕಾಂಬರ ₹ 600, ಸೇವಂತಿಗೆ ₹ 150ಕ್ಕೆ ಮಾರಾಟವಾಗುತ್ತಿದೆ. ಹಬ್ಬ ಹತ್ತಿರವಾಗುತ್ತಿದ್ದಂತೆ ಈ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ರೈತರಲ್ಲಿ ಆತಂಕ: ತೋಟಗಳಲ್ಲಿ ಹೂವಿನ ಬೆಳೆ ತುಂಬಾ ಚೆನ್ನಾಗಿ ಬಂದಿದೆ. ಮಾರುಕಟ್ಟೆಯಲ್ಲೂ ಉತ್ತಮ ಬೆಲೆಯಿದೆ. ಇತ್ತೀಚೆಗೆ ಉತ್ತಮವಾದ ಮಳೆಯಾಗುತ್ತಿರುವ ಕಾರಣ ಮಳೆ ನೀರು ಹೂವಿನಲ್ಲಿ ಸೇರಿದರೆ ಕೊಳೆತು ಹೋಗುತ್ತದೆ. ಇದರಿಂದ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುವ ಆತಂಕ ರೈತರಿಗೆ ಕಾಡುತ್ತಿದೆ.
ಹಬ್ಬ ಮುಗಿಯುವ ತನಕ ಮಳೆಯಾಗಲಿಲ್ಲ ಅಂದರೆ ಹೂವಿನ ಬೆಲೆ ಮತ್ತಷ್ಟು ಏರಿಕೆಯಾಗುತ್ತದೆ. ಇದರಿಂದ ನಮಗೆ ಅನುಕೂಲವಾಗುತ್ತದೆ. ಸಾಲವನ್ನಾದರೂ ತೀರಿಸಿಕೊಳ್ಳಲು ಅನುಕೂಲವಾಗುತ್ತದೆ ಎಂಬುದು ಬೆಳೆಗಾರರ ಲೆಕ್ಕಾಚಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.